ADVERTISEMENT

ಕಾರಟಗಿ | ಬೀದಿ ಬದಿ ವ್ಯಾಪಾರಿ, ಆಟೊ ಚಾಲಕರ ಸಭೆ: ತಾತ್ಕಾಲಿಕ ಪರಿಹಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 5:30 IST
Last Updated 17 ಸೆಪ್ಟೆಂಬರ್ 2025, 5:30 IST
ಕಾರಟಗಿಯ ಪುರಸಭೆಯಲ್ಲಿ ಆಟೋ ಚಾಲಕರ, ಬೀದಿಬದಿಯ ವ್ಯಾಪಾರಸ್ಥರ ಹಾಗೂ ವಿವಿಧ ಸಂಘಟನೆಗಳ ಸಭೆಯ ಮಂಗಳವಾರ ನಡೆಯಿತು
ಕಾರಟಗಿಯ ಪುರಸಭೆಯಲ್ಲಿ ಆಟೋ ಚಾಲಕರ, ಬೀದಿಬದಿಯ ವ್ಯಾಪಾರಸ್ಥರ ಹಾಗೂ ವಿವಿಧ ಸಂಘಟನೆಗಳ ಸಭೆಯ ಮಂಗಳವಾರ ನಡೆಯಿತು   

ಕಾರಟಗಿ: ಪಟ್ಟಣದ ಬಸ್‌ ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಿರುವ ಆಟೊ ನಿಲ್ದಾಣದಲ್ಲಿ ಆಟೊ ನಿಲುಗಡೆ ವಿಷಯವಾಗಿ ಚಾಲಕರ ಹಾಗೂ ಬೀದಿ ಬದಿಯ ತಳ್ಳುವ ಬಂಡಿಗಳ ವ್ಯಾಪಾರಸ್ಥರ ನಡುವೆ ನಡೆದಿದ್ದ ಜಟಾಪಟಿಗೆ ಮಂಗಳವಾರ ತಾತ್ಕಾಲಿಕ ತೆರೆ ಬಿದ್ದಿದೆ.

ಪುರಸಭೆಯಿಂದ ₹4 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ನಿಲ್ದಾಣದಲ್ಲಿ ಆಟೊಗಳ ನಿಲುಗಡೆಗೆ ಬೀದಿ ಬದಿಯ ಗೂಡಂಗಡಿಗಳಿಂದ ಸಮಸ್ಯೆಯಾಗಿತ್ತು.

ಪುರಸಭೆ ಕಚೇರಿಯಲ್ಲಿ ಅಧ್ಯಕ್ಷೆ ರೇಖಾ ಆನೆಹೊಸೂರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ನೇತೃತ್ವದಲ್ಲಿ ಆಟೊ ಚಾಲಕರು, ಬೀದಿ ಬದಿಯ ವ್ಯಾಪಾರಸ್ಥರು, ಸ್ಥಳೀಯ ಜಾಗೃತ ಯುವಕ ಸಂಘ ಹಾಗೂ ದಲಿತ ವಿಮೋಚನಾ ಸೇನೆಯ ಪದಾಧಿಕಾರಿಗಳು ಚರ್ಚಿಸಿ ಸಮಸ್ಯೆಗೆ ಪರಿಹಾರ ದೊರಕಿಸಿ ಸಮಸ್ಯೆಗೆ ತೆರೆ ಎಳೆದಿದ್ದಾರೆ. 

ADVERTISEMENT

ಆಟೊ ಚಾಲಕರ ಸಂಘದ ಅಧ್ಯಕ್ಷ ಹನುಮಂತ, ‘ಗ್ಯಾಸ್ ಅವಲಂಬಿತ ಆಟೊಗಳಿದ್ದು ತಳ್ಳುವ ಬಂಡಿಗಳ ವ್ಯಾಪಾರಿಗಳು ಸದಾ ಒಲೆ ಉರಿಸುವುದರಿಂದ ಅಪಾಯದ ಸಾಧ್ಯತೆ ಇದೆ. ಆಟೊ ನಿಲುಗಡೆಗೆ ಸಮಸ್ಯೆಯಾಗುತ್ತಿದೆ’ ಎಂದರು.

ಎಗ್‍ರೈಸ್, ಇಡ್ಲಿ ಬಂಡಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಬಸ್‌ ನಿಲ್ದಾಣದ ಇತರೆ ಜಾಗೆಯಲ್ಲಿ ಮಾಡಬೇಕು ಎಂದು ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ ಹಾಗೂ ದಲಿತ ವಿಮೋಚನಾ ಸೇನೆಯ ಜಮದಗ್ನಿ ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್ ಪ್ರತಿಕ್ರಿಯಿಸಿ, ‘ಒಂದೆರಡು ತಿಂಗಳಲ್ಲಿ ರಸ್ತೆ ವಿಸ್ತರಣೆ ನಡೆಯಲಿದ್ದು ಎಲ್ಲರನ್ನೂ ತೆರವುಗೊಳಿಸಬೇಕಾಗುತ್ತದೆ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ಸೂಕ್ತ ಸ್ಥಳ ಹುಡುಕಿಕೊಳ್ಳಬೇಕು’ ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸದಸ್ಯರಾದ ರಾಜಶೇಖರ ಸಿರಿಗೇರಿ, ಹಿರೇಬಸಪ್ಪ ಸಜ್ಜನ, ವೀರೇಶ ಮುದಗಲ, ಜಾಗೃತ ಯುವಕ ಸಂಘದ ಮಾಜಿ ಅಧ್ಯಕ್ಷರಾದ ಪ್ರಹ್ಲಾದ್ ಜೋಷಿ, ಎಂ. ಸಂದೀಪ್‍ಗೌಡ, ಉಪಾಧ್ಯಕ್ಷ ಅಯ್ಯಪ್ಪ ಉಪ್ಪಾರ ಸಹಿತ ಅನೇಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.