
ಸಾಂದರ್ಭಿಕ ಚಿತ್ರ
ಮುನಿರಾಬಾದ್: ಸಮೀಪದ ಹೊಸಲಿಂಗಾಪುರ ಗ್ರಾಮದ ಕರುಮಾರಿಯಮ್ಮದೇವಿ ದೇವಸ್ಥಾನ ಹಾಗೂ ಕಾಳಿಕಾದೇವಿ ದೇವಸ್ಥಾನದಲ್ಲಿ ಕಳವು ನಡೆದಿದೆ. ಗುರುವಾರ ರಾತ್ರಿ ಗ್ರಾಮದ ಕಾಳಿಕಾದೇವಿ ದೇವಸ್ಥಾನದಲ್ಲಿ ಎದುರಿನ ಗ್ರಿಲ್ಸ್ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಹುಂಡಿಯನ್ನೇ ಕದ್ದಿದ್ದಾರೆ. ದೇವಸ್ಥಾನದ ಎದುರು ಬಲ್ಬ್ ಬಿಚ್ಚಿಟ್ಟು ದಾರಿ ಹೋಕರಿಗೆ ತಿಳಿಯದಂತೆ ಮಾಡಿದ್ದಾರೆ.
ಕರುಮಾರಿಯಮ್ಮ ದೇವಸ್ಥಾನ: ಗ್ರಾಮದ 3ನೇ ವಾರ್ಡ್‌ನ ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಬಳಿಯಿರುವ ದೇವಸ್ಥಾನದಲ್ಲಿ ಕಳ್ಳರು ದೇವಿಯ ಕೊರಳಲ್ಲಿದ್ದ 6 ಗ್ರಾಂ ಚಿನ್ನದ ತಾಳಿ ಸರ ಹಾಗೂ ಹುಂಡಿಯಲ್ಲಿನ ನಗದು ಹಾಗೂ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ್ದಾರೆ.
ಕಳವಿಗೆ ಯತ್ನ: ಇದೇ ಗ್ರಾಮದ ರುಕ್ಮಿಣಿ-ಪಾಂಡುರಂಗ ದೇವಸ್ಥಾನದಲ್ಲಿ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು, ಹುಂಡಿಯನ್ನು ಕೀಳ ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ.
ಗ್ರಾಮಸ್ಥರ ಆಕ್ರೋಶ: ಗ್ರಾಮದ ಮುಖಂಡರಾದ ಹುಲುಗಪ್ಪ ಹೊಟ್ಟಿ ಮತ್ತು ಕಿಶೋರ ಇತರರು ಘಟನೆ ಖಂಡಿಸಿ ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿ ಕಾರಿದ್ದಾರೆ. ಕೇವಲ 3 ಕಿ.ಮೀ. ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ ಇದ್ದರೂ ಗ್ರಾಮದಲ್ಲಿ ಕಳವು ತಡೆಯಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪೊಲೀಸ್ ವರಿಷ್ಠಾಧಿಕಾರಿ ಇತ್ತ ಗಮನ ಹರಿಸಬೇಕು. ರಾತ್ರಿಗಸ್ತು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.