ತಾವರಗೇರಾ: ‘ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಒಟ್ಟಾಗಿ ಹೋರಾಟ ಮಾಡುವ ಮೂಲಕ ಬಲ್ಡೋಟಾ ಕಾರ್ಖಾನೆ ಸ್ಥಾಪನೆ ಮಾಡದಂತೆ ನೋಡಿಕೊಳ್ಳಬೇಕು. ಈ ಹೋರಾಟ ಸಮಗ್ರ ದೃಷ್ಟಿಕೋನ ಮತ್ತು ವೈಚಾರಿಕತೆಯಿಂದ ಕೂಡಿರಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಹಾಗೂ ಪರಿಸರ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದರು.
ಪಟ್ಟಣ ಹೊರವಲಯದ ಬುದ್ಧ ವಿಹಾರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪರಿಸರ ಜಾಗೃತಿ ಅಧ್ಯಯನ ಶಿಬಿರದಲ್ಲಿ ಮಾತನಾಡಿ,‘ಆಡಳಿತ ನಡೆಸುವ ಸರ್ಕಾರ ಮತ್ತು ರಾಜಕಾರಣಿಗಳು ಉದ್ಧಟತನ ತೋರಿದರೆ ಅದನ್ನು ಪ್ರಶ್ನಿಸುವ ಕಾರ್ಯವನ್ನು ಸಂಘಟನೆಗಳು ಮಾಡಬೇಕು. ಒಂದು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕಾದರೆ ಸಾರ್ವಜನಿಕರ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಸಂವಿಧಾನ ಹೇಳುತ್ತದೆ. ಆದರೂ ಕಾನೂನು ಉಲ್ಲಂಘಟನೆ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸ ಲಾಗುತ್ತಿದೆ’ ಎಂದರು.
‘ಕೊಪ್ಪಳ ಭಾಗದ ಹಲವಾರು ಗ್ರಾಮಗಳ ಜನರಲ್ಲಿ ವಿವಿಧ ಕಾಯಿಲೆಗಳು ಕಾಣಿಸಿಕೊಂಡಿವೆ. ರೈತರ ಜೀವನಾಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಂದು ಕಂಪನಿಗಳು ಅನಾರೋಗ್ಯದ ವಾತಾವರಣ ಸೃಷ್ಟಿ ಮಾಡುತ್ತಿವೆ. ಭವಿಷ್ಯದ ಬುನಾದಿಗಾಗಿ ಸದ್ಯ ಹೋರಾಟ ಮುಖ್ಯವಾಗಿದೆ’ ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರ,‘ಕೊಪ್ಪಳ ಸುತ್ತಲಿನ ಗ್ರಾಮಗಳು ಅಷ್ಟೇ ಅಲ್ಲದೇ ಕೊಪ್ಪಳ ನಗರವನ್ನೂ ಕಾರ್ಖಾನೆಗಳ ದೂಳು, ಹೊಗೆ ಪ್ರವೇಶಿಸಿದೆ’ ಎಂದರು.
‘ಒಂದು ಭಾಗದಲ್ಲಿ ಅತಿ ಹೆಚ್ಚು ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ. ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ಪರಿಸರ ಹದಗೆಟ್ಟಿದೆ. ವಿವಿಧ ಗ್ರಾಮಗಳಲ್ಲಿ ಜನರು ಅಸ್ತಮಾ, ಟಿ.ಬಿ, ಕ್ಯಾನ್ಸರ್, ಕೆಮ್ಮು ಸೇರಿ ಹಲವು ರೋಗಗಳಿಗೆ ತುತ್ತಾಗಿದ್ದಾರೆ. ಆದರೂ ಸರ್ಕಾರ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದೆ’ ಎಂದು ಹೇಳಿದರು.
‘ಪರಿಸರ ಸಂರಕ್ಷಣೆ ಕುರಿತು ಕೊಪ್ಪಳ ಬಚಾವೋ ಆಂದೋಲನದ ನೇತೃತ್ವ, ವಿವಿಧ ಸಂಘಟನೆಗಳು, ಗವಿ ಮಠದ ಅಭಿನವ ಗವಿಸಿದ್ದೇಶ್ವರರ ಸಾನ್ನಿಧ್ಯದಲ್ಲಿ ಈಗಾಗಲೇ ಕೊಪ್ಪಳ ಬಂದ್ ಮಾಡಿ ಹೋರಾಟ ಮಾಡಲಾಗಿದೆ. ಈಚೆಗೆ ನಡೆದ ಅಧಿವೇಶನದಲ್ಲಿ ಬೇರೆ ಜಿಲ್ಲೆಯ ಜನಪ್ರತಿನಿಧಿಗಳೂ ಕೊಪ್ಪಳ ಜಿಲ್ಲೆಯಲ್ಲಿ ಕೈಗಾರಿಕೆಗಳಿಂದ ಉಂಟಾಗಿರುವ ಪರಿಸರ ಮಾಲಿನ್ಯದ ಕುರಿತು ಚರ್ಚೆ ಮಾಡಿದ್ದಾರೆ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಮಾಡಿಲ್ಲ. ಆದ್ದರಿಂದ ಯುವಜನತೆ ನೇತೃತ್ವದಲ್ಲಿ ನಮ್ಮ ಕೊಪ್ಪಳ ಬಚಾವೋ ಆಂದೋಲನದ ಮೂಲಕ ಇಂಥ ಪರಿಸರ ಅಧ್ಯಯನ ಶಿಬಿರ ಏರ್ಪಡಿಸಿ ಮುಂದಿನ ದಿಟ್ಟ ಹೋರಾಟಕ್ಕೆ ಹೆಜ್ಜೆ ಹಾಕೋಣ’ ಎಂದರು.
ಆಂದೋಲನದ ಸಂಚಾಲಕ ಕೆ.ಬಿ.ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶುಖರಾಜ ತಾಳಕೇರಿ, ಮಹಾಂತೇಶ ಕೊತಬಾಳ, ಮುದಕಪ್ಪ ಹೊಸಮನಿ, ರಾಘವೇಂದ್ರ ಕುಷ್ಟಗಿ, ನಬಿಸಾಬ್ ಮೂಲಿಮನಿ, ರೈತ ಮುಖಂಡ ಮದ್ದಾನಯ್ಯ ಹಿರೇಮಠ, ಮಾನವ ಬಂಧುತ್ವ ವೇದಿಕೆ ಸಂಚಾಲಕಿ ಶಶಿಕಲಾ ಮಾತನಾಡಿದರು. ವೇದಿಕೆಯಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಚ ಸಲ್ಲಿಸುವ ಮೂಲಕ ಹುತಾತ್ಮ ದಿನ ಆಚರಿಸಲಾಯಿತು.
ನಂತರ ಗೋಷ್ಠಿಗಳು ನಡೆದವು.
ಶಿಬಿರದಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರರು, ಕೊಪ್ಪಳ ಬಚಾವೋ ಆಂದೋಲನದ ಪದಾಧಿಕಾರಿಗಳು, ಜಿಲ್ಲೆಯ ಯುವಕರು ಹಾಗೂ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.