
ಕೊಪ್ಪಳ: ರೈತರಿಗೆ ತೊಂದರೆಯಾಗದಂತೆ ಜೂನ್ ಅಂತ್ಯದೊಳಗೆ ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಬೇಕು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಮುನಿರಾಬಾದ್‌ನಲ್ಲಿ ಮಂಗಳವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು ‘ನಿಗದಿತ ಸಮಯದೊಳಗೆ ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್‌ಗೇಟ್ ಅಳವಡಿಸಿ ರೈತರಿಗೆ ತೊಂದರೆಯಾಗದಂತೆ ತುಂಗಭದ್ರಾ ಮಂಡಳಿ ಹಾಗೂ ಇಲಾಖೆ ಅಧಿಕಾರಿಗಳು ಸಮನ್ವತೆಯಿಂದ ಕೆಲಸ ಮಾಡಿ ಜೂನ್ ಅಂತ್ಯದ ಒಳಗೆ ಪೂರ್ಣಗೊಳಿಸಬೇಕು’ ಎಂದರು.
‘ಜಲಾಶಯದ ಎಲ್ಲ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ 15 ಗೇಟ್‌ಗಳು ತಯಾರಾಗಿವೆ. ಆಂಧ್ರ ಸರ್ಕಾರ ₹20 ಕೋಟಿ ನೀಡಿದೆ. ಕರ್ನಾಟಕ ಸರ್ಕಾರ ₹10 ಕೋಟಿ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಿದೆ. ಉಳಿದ 18 ಗೇಟ್‌ಗಳನ್ನು ಗುತ್ತಿಗೆದಾರರು ತಯಾರಿ ಮಾಡಿ ಜೂನ್ ಒಳಗೆ ಕೆಲಸ ಮುಗಿಸಲು ಕ್ರಮ ವಹಿಸಬೇಕು. ಈ ಕುರಿತು ತಾಂತ್ರಿಕ ಅಧಿಕಾರಿಗಳು ನಿಗಾ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಡಿಸೆಂಬರ್ 5ರಂದು ಗೇಟ್‌ಗಳ ಮೇಲಿನ ಕವಚಗಳನ್ನು ತೆರೆಯುವ ಕೆಲಸ ಪ್ರಾರಂಭಿಸಲಾವುದು ಎಂದು ತಾಂತ್ರಿಕ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
‘ಆಂಧ್ರಕ್ಕೆ ನದಿ ಮೂಲಕ ಸುಮಾರು 7 ಟಿಎಂಸಿ ಅಡಿಯಷ್ಟು ಹಾಗೂ ತೆಲಂಗಾಣಕ್ಕೆ 5 ಟಿಎಂಸಿ ಅಡಿಯಷ್ಟು ನೀರು ಹೊರಬಿಡಬೇಕಾಗಿದೆ. ಈ ಕುರಿತು ತುಂಗಭದ್ರಾ ಮಂಡಳಿಯಲ್ಲಿ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಜೊತೆ ಚರ್ಚಿಸಿ ನದಿ ಮೂಲಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕು.ಗೇಟ್‌ಗಳನ್ನು ಅಳವಡಿಸಲು ಮುಖ್ಯವಾಗಿ ಆಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆ ಮಾಡಬೇಕು. ನಾಲೆಗಳ ದುರಸ್ತಿಗಾಗಿ ಹಣಕಾಸು ಇಲಾಖೆಗೆ ಹಣ ಮೀಸಲಿಡಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಲಕ್ಷ್ಮಣ ನಾಯಕ್, ಎಸ್.ಇ. ಸತ್ಯನಾರಾಯಣ, ಶಾಂತರಾಜ್, ಇಇ ಗೋಡೆಕರ್, ಗಿರೀಶ್, ವಿಜಯಲಕ್ಷ್ಮಿ, ಕಾಂಗ್ರೆಸ್ ಮುಖಂಡರಾದ ಶಾಂತಪ್ಪ ದೊಡ್ಡಬಸಪ್ಪ ಗೌಡ, ಅಮರೇಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.