ADVERTISEMENT

‘ತುಂಗಭದ್ರೆಯ ಉಳಿವಿಗೆ ಎಲ್ಲರೂ ಕೈ ಜೋಡಿಸಿ’

ಪ್ರಚಾರದ ವಾಹನಕ್ಕೆ ಚಾಲನೆ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮನವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 4:33 IST
Last Updated 24 ಡಿಸೆಂಬರ್ 2025, 4:33 IST
ಕಾರಟಗಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯ ಪ್ರಚಾರ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೋಮವಾರ ಚಾಲನೆ ನೀಡಿದರು
ಕಾರಟಗಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯ ಪ್ರಚಾರ ವಾಹನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೋಮವಾರ ಚಾಲನೆ ನೀಡಿದರು   

ಕಾರಟಗಿ: ‘ಕೋಟ್ಯಂತರ ಜನ ಹಾಗೂ ಜಲಚರಗಳಿಗೆ ನೀರೊದಗಿಸುವ ತುಂಗಭದ್ರಾ ಉಳಿವಿಗಾಗಿ ನಡೆಯುತ್ತಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯೂ ಆಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆಯ ಪ್ರಚಾರ ವಾಹನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

‘ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ನದಿಯನ್ನು ಮುಂದಿನ ಪೀಳಿಗೆಗೆ ಜೋಪಾನವಾಗಿ ಕಾದಿಡಬೇಕಿದೆ. ನದಿ ಕಲುಷಿತಗೊಂಡು ನೀರು ಕುಡಿಯಲೂ ಯೋಗ್ಯವಿಲ್ಲ ಎನ್ನುವ ಆತಂಕಕಾರಿ ಅಂಶ ಬಯಲಾಗಿರುವುದು ವಿಷಾದನೀಯ’ ಎಂದರು.

ADVERTISEMENT

‘ನದಿ ಜನರ ಬದುಕು, ಜೀವರಾಶಿಗಳಿಗೆ ಕಂಟಕವಾಗುತ್ತಿರುವುದನ್ನು ತಪ್ಪಿಸಬೇಕಿದೆ. ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಿ ನಿರ್ಮಲ ತುಂಗಭದ್ರೆಯನ್ನಾಗಿಸಬೇಕಿದೆ. ಡಿ.27ರಿಂದ ಕಿಷ್ಕಿಂದೆಯಿಂದ ಮಂತ್ರಾಲಯದವರೆಗೆ ಪಾದಯಾತ್ರೆ ಕೈಗೊಂಡು, ಡಿ.28ರಂದು ಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಲಾಗುವುದು’ ಎಂದರು.

ಪಾದಯಾತ್ರೆಯ ಸಂಚಾಲಕ ಡಾ.ಶಿವಕುಮಾರ ಗಂಗಾವತಿ ಮಾತನಾಡಿ,‘ತುಂಗಭದ್ರಾ ನದಿ ಕಲುಷಿತಗೊಳ್ಳುತ್ತಿದೆ. ಈಗಲೇ ಎಚ್ಚೆತ್ತುಕೊಂಡು ನಿರ್ಮಲ ತುಂಗಭದ್ರೆಯ ಅಸ್ತಿತ್ವ ಕಾಪಾಡಬೇಕಿದೆ. ಭವಿಷ್ಯದ ಪೀಳಿಗೆಗೆ ನಿರ್ಮಲ ತುಂಗಭದ್ರೆಯನ್ನು ಬಳುವಳಿಯಾಗಿ ಉಳಿಸಲೇಬೇಕಿದೆ. ಜನ ಜಾಗೃತಿ, ಜಲ ಜಾಗೃತಿಗಾಗಿ ಪಾದಯಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.

ಮುಖಂಡರಾದ ಶಿವರೆಡ್ಡಿ ನಾಯಕ, ಕೆ.ಸಿದ್ದನಗೌಡ, ಚನ್ನಬಸಪ್ಪ ಸುಂಕದ, ಬೂದಿ ಗಿರಿಯಪ್ಪ, ಬ್ಲಾಕ್‌ ಕಾಂಗ್ರೆಸ್‌  ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ, ಅಯ್ಯಪ್ಪ ಉಪ್ಪಾರ, ಶರಣಪ್ಪ ಪರಕಿ, ಗುತ್ತಿಗೆದಾರ ಮೋಹನ್, ಹಿರೇಬಸಪ್ಪ ಸಜ್ಜನ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕಾಧ್ಯಕ್ಷ ದೇವಪ್ಪ, ಸೋಮನಾಥ ದೊಡ್ಡಮನಿ, ಉದಯ ಈಡಿಗೇರ್, ಗೋಪಿ ಕೊಂಡೇಟಿ, ರಾಜಶೇಖರ ಆನೆಹೊಸೂರು, ಖಾಜಾ ಹುಸೇನ್ ಮುಲ್ಲಾ, ಪ್ರಮುಖರಾದ ಪ್ರಭು ಉಪನಾಳ, ಜಾಗೃತ ಯುವಕ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಶರಣಪ್ಪ ಕೋಟ್ಯಾಳ, ಪ್ರಹ್ಲಾದ ಜೋಷಿ, ರುದ್ರೇಶ ಮಂಗಳೂರು, ಶರಣಪ್ಪ ಕಾಯಿಗಡ್ಡಿ ಹಾಗೂ ಸಂದೀಪಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.