ADVERTISEMENT

ಯುಗಾದಿ: ಜಿಲ್ಲೆಯ ವಿವಿಧೆಡೆ ಜಾತ್ರೆ, ರಥೋತ್ಸವ

ಮುಳ್ಳಿನ ಗಿಡದ ಮೇಲೆ ಉರುಳು ಸೇವೆ: ಬಣ್ಣ ಎರಚಿ ಸಂಭ್ರಮಿಸಿದ ಯುವಜನರು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 7:05 IST
Last Updated 15 ಏಪ್ರಿಲ್ 2021, 7:05 IST
ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಗ್ರಾಮದಲ್ಲಿ ಯುಗಾದಿ ಪಾಡ್ಯ ಕರಿ ದಿನದಂದು ಹನುಮಂತ ದೇವರ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಜರುಗಿತು
ಕೊಪ್ಪಳ ತಾಲ್ಲೂಕಿನ ಗಿಣಿಗೇರಾ ಗ್ರಾಮದಲ್ಲಿ ಯುಗಾದಿ ಪಾಡ್ಯ ಕರಿ ದಿನದಂದು ಹನುಮಂತ ದೇವರ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಜರುಗಿತು   

ಕೊಪ್ಪಳ:ಯುಗಾದಿ ಹಬ್ಬದನಿಮಿತ್ತ ಮಾರುತೇಶ್ವರ ಜಾತ್ರೆಯ ಅಂಗವಾಗಿ ತಾಲ್ಲೂಕಿನ ಬಿಕನಹಳ್ಳಿ ಗ್ರಾಮದಲ್ಲಿ ಯುವಕರು ಬಣ್ಣದೋಕಳಿಯಲ್ಲಿ ಮಿಂದೇದ್ದರೆ ಸಣ್ಣ ಸಣ್ಣ ಮಕ್ಕಳು ಮುಳ್ಳಿನ ಗಿಡದಲ್ಲಿ ಜಿಗಿದು ಕುಣಿದಾಡಿದರು.

ಪ್ರತಿ ವರ್ಷದಂತೆ ಯುಗಾದಿ ಪಾಡ್ಯದ ದಿನದಂದು ಉಚ್ಚಾಯ ಉತ್ಸವ ಜರುಗುತ್ತದೆ. ಬೆಳಿಗ್ಗೆ ಗ್ರಾಮ ದೇವತೆ ದುರ್ಗಾದೇವಿ ಮೂರ್ತಿ ಮೆರವಣಿಗೆ ನಡೆಯಿತು. ಮನೆ ಮನೆಗೆ ತೆರಳಿ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಆದರೆ ಪಾಡ್ಯದ ಮರುದಿನ ಬುಧವಾರ ಮಧ್ಯಾಹ್ನ ಗ್ರಾಮದ ಆಂಜನೆಯ ಪಲ್ಲಕ್ಕಿಯು ಗ್ರಾಮದ ಹೊರ ವಲಯದಲ್ಲಿ ಸಾಗಿ ಬ್ಯಾಟಿ ಗಿಡವನ್ನು ಅಂದರೆ ಮುಳ್ಳಿನ ಗಿಡವನ್ನು ಕಿತ್ತು ಮಕ್ಕಳ ಕೈಯಲ್ಲಿ ಹಿಡಿದುಕೊಳ್ಳಲು ನೀಡುತ್ತಾರೆ. ಆದರೆ ಮಕ್ಕಳ ಮೈ ಮೇಲೆ ನೀರು ಸುರಿಯುತ್ತಿದ್ದಂತೆ ಮಕ್ಕಳು ಮುಳ್ಳಿನ ಗಿಡವವನ್ನು ನೆಲಕ್ಕೆ ಇಟ್ಟು ಮುಳ್ಳಿನ ಮೆಲೆ ಬಿದ್ದು ಹೊರಳಾಡುವ ದೃಶ್ಯ ನೋಡುಗರನ್ನು ರೋಮಾಂಚನ ಗೊಳಿಸುವಂತೆ ಮಾಡಿತು.

ADVERTISEMENT

ಆದರೆ ಯುವಕರು ಹೋಳಿ ಹುಣ್ಣಿಮೆ ಬದಲಾಗಿ ಈ ಯುಗಾದಿಯಲ್ಲಿ ಯುವಕರು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಬಣ್ಣದೋಕಳಿಯಲ್ಲಿ ಮಿಂದೆದ್ದರು. ನಂತರ ನೀರು ತುಂಬಿದ ಹೊಂಡದಲ್ಲಿ ಮಾರುತೇಶ್ವರ ಪೂಜಾರಿ ಹೊಂಡದಲ್ಲಿ ಮುಳಗಿ ನಿಂತ ಜನಕ್ಕೆ ನೀರು ಉಗ್ಗುತ್ತದ್ದಂತೆ ಸುತ್ತ ನಿಂತ ಯುವಕರು ಹೊಂಡದಲ್ಲಿ ಜಿಗಿದು ನೀರು ಓಕಳಿಯಾಟ ಆಡಿದರು.

ಕರಿಸಿದ್ದೇಶ್ವರ ರಥೋತ್ಸವ: ಧರ್ಮ ಸಭೆ

ಹನುಮಸಾಗರ: ಇಲ್ಲಿನ ಕರಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಮಹಾ ರಥೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕುದರಿಮೋತಿ ಹಾಗೂ ಮೈಸೂರು ಮಠದ ವಿಜಯಮಹಾಂತ ಸ್ವಾಮಿಗಳ ನೇತೃತ್ವದಲ್ಲಿ, ಕೊರೊನಾ ಕಾರಣದಿಂದ ಮಧ್ಯಾಹ್ನವೇ ಸಂಕ್ಷಿಪ್ತವಾಗಿ ರಥೋತ್ಸವ ನಡೆಸಲಾಯಿತು.

ರಥೋತ್ಸವದಲ್ಲಿ ಬಾಜಾ–ಭಜಂತ್ರಿ, ಕರಡಿ ಮಜಲಿನ ಮೇಳಗಳು, ಭಜನೆ ಕಲಾವಿದರು ಭಾಗವಹಿಸಿದ್ದರು. ಸಂಜೆ ನಡೆದ ಧರ್ಮ ಸಭೆಯಲ್ಲಿ ವಿಜಯ ಮಹಾಂತಸ್ವಾಮೀಜಿ ಆಶೀರ್ವಚನ ನೀಡಿದರು. ಜಾತ್ರಾ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದವರನ್ನು ಶ್ರೀಗಳು ಸತ್ಕರಿಸಿದರು.

ಪುರಾಣಿಕರಾದ ಸಿದ್ಧಲಿಂಗ ಶ್ರೀಗಳು, ಪ್ರಮುಖರಾದ ಚಂದಪ್ಪ ಅಗಸಿಮುಂದಿನ, ಬಸವರಾಜ ಚಿನಿವಾಲರ, ಬಸಣ್ಣ ಅಗಸಿಮುಂದಿನ, ಸಂಗಯ್ಯ ವಸ್ತ್ರದ, ಮಹಾಂತೇಶ ಅಗಸಿಮುಂದಿನ, ಬಸವರಾಜ ಹಳ್ಳೂರ, ಪ್ರಶಾಂತ ಗಡಾದ, ಲಿಂಗಪ್ಪ ಮೋಟಗಿ, ಶೇಖರಪ್ಪ ದೋಟಿಹಾಳ, ರಾಚಪ್ಪ ಚಿನಿವಾಲರ, ಕರಿಸಿದ್ದಪ್ಪ ಕುಷ್ಟಗಿ, ಮಲ್ಲಯ್ಯ ಕೋಮಾರಿ, ವಿಶ್ವನಾಥ ಕನ್ನೂರ, ಈರಣ್ಣ ಹುನಗುಂಡಿ, ಮಹಾಂತಯ್ಯ ಕೋಮಾರಿ ಹಾಗೂ ಶ್ರೀಶೈಲಪ್ಪ ಮೋಟಗಿ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.