ಯಲಬುರ್ಗಾ: ಪಟ್ಟಣದ ಕುದ್ರಿಕೊಟಗಿ ರಸ್ತೆ ಪಕ್ಕದಲ್ಲಿ ನಿರ್ಮಿಸಲಾಗಿರುವ ವಾಲ್ಮೀಕಿ ಸಮುದಾಯ ಭವನ ಬಳಕೆಯಾಗದೇ ಅನಾಥವಾಗಿದೆ. ಅಗತ್ಯ ಸೌಲಭ್ಯಗಳಿದ್ದರೂ ಸಂಪರ್ಕ ಹಾಗೂ ಪಟ್ಟಣದ ಹೊರವಲಯದಲ್ಲಿ ಇರುವುದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮುದಾಯ ಭವನವು ಇದ್ದೂ ಇಲ್ಲದಂತಾಗಿದೆ.
ಸಮುದಾಯದ ಅಭಿವೃದ್ಧಿಗೆ ನಿರ್ಮಾಣಗೊಂಡಿರುವ ಭವನವು, ಸಮಾಜ ಕಲ್ಯಾಣ ಇಲಾಖೆಗೆ ಸೇರಿದೆ. ಆದರೆ ಸೂಕ್ತ ನಿರ್ವಹಣೆಯಿಲ್ಲದೇ ಕಟ್ಟಡದ ಬಾಗಿಲು, ಕಿಟಕಿಗಳು ಹಾಳಾಗಿವೆ. ಮಳೆಯಾದರೆ ಭವನದ ಸುತ್ತ ಮಳೆ ನೀರು ಸಂಗ್ರಹಗೊಂಡು, ಕಟ್ಟಡವು ನಡುಗಡ್ಡೆಯಂತಾಗುತ್ತದೆ. ಸಮುದಾಯ ಬಳಸಿಕೊಳ್ಳಬೇಕೆಂದು ಮನಸ್ಸು ಮಾಡಿದರೂ, ಪಟ್ಟಣದ ಹೊರವಲಯಲ್ಲಿರುವುದರಿಂದ ಬಸ್ ಸಂಪರ್ಕವಿಲ್ಲ. ಹೀಗಾಗಿ ಭವನವು ಪಾಳುಬಿದ್ದಂತಾಗಿದೆ.
‘ಶಾಸಕ ಬಸವರಾಜ ರಾಯರಡ್ಡಿ, 2015–16ರಲ್ಲಿ ₹ 1 ಕೋಟಿ ಅನುದಾನ ನೀಡಿದ್ದರು. ಭವನವೂ ನಿರ್ಮಾಣವಾಯಿತು. ಆದರೆ ನಿರ್ವಹಿಸಬೇಕಾದ ಪಟ್ಟಣ ಪಂಚಾಯಿತಿಯವರು, ಕಾಳಜಿ ವಹಿಸುತ್ತಿಲ್ಲ’ ಎಂದು ಮುಖಂಡ ಶಶಿಧರ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ.
‘ವಾಲ್ಮೀಕಿ ಸಮಾಜ ಮತ್ತು ಇನ್ನಿತರ ಸಮಾಜದವರು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೈಗೊಂಡು ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂಬ ನಿಲುವುಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ತೋರುತಿಲ್ಲ. ಅವರ ನಿರ್ಲಕ್ಷ್ಯದಿಂದಾಗಿಯೇ ಕಟ್ಟಡದ ಸುತ್ತಲು ನೀರು ಸಂಗ್ರಹಗೊಳ್ಳುತ್ತಿದೆ. ಕಸ, ಮುಳ್ಳಿನ ಗಿಡಗಳು ಬೆಳೆದಿವೆ. ಉತ್ತಮ ಸ್ಥಿತಿಯಲ್ಲಿರುವ ಕಟ್ಟಡ ಬಳಸಿಕೊಳ್ಳದೇ ಬಿಟ್ಟಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕನ್ನಡಿಯಾಗಿದೆ. ಶಾಸಕರ ಕಾಳಜಿಯಿಂದ ಸಮುದಾಯ ಭವನ ನಿರ್ಮಾಣವಾಗಿದ್ದು, ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಳಾಗುತ್ತಿದೆ’ ಎಂದು ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಚನ್ನಬಸವ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಂಬಂಧಪಟ್ಟವರು ಅಗತ್ಯ ಸೌಲಭ್ಯ ಕಲ್ಪಿಸಿಕೊಡಬೇಕು. ಭವನದ ಆವರಣ ಸ್ವಚ್ಛಗೊಳಿಸಬೇಕು. ಮಳೆ ಬಂದಾಗ ಹೊಂಡದಂತಾಗುವುದನ್ನು ಮಣ್ಣು ಹಾಕಿ ಎತ್ತರಿಸಿ, ನೀರು ನಿಲ್ಲದಂತೆ ಕ್ರಮವಹಿಸಬೇಕು. ಕಿಡಿಗೇಡಿಗಳಿಂದಾಗಿ ಒಡೆದಿರುವ ಕಿಟಕಿ ಗಾಜುಗಳನ್ನು ಅಳವಡಿಸಬೇಕು. ವಿಶೇಷ ಕಾಳಜಿ ನಿರ್ವವಹಿಸಬೇಕು’ ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.
ಪಟ್ಟಣದಿಂದ ದೂರದಲ್ಲಿರುವುದರಿಂದ ಕಾರ್ಯಕ್ರಮ ಆಯೋಜಿಸಲು ಜನರು ಮುಂದೆ ಬರುತ್ತಿಲ್ಲ. ಸೌಲಭ್ಯ ಒದಗಿಸಲು ಪಂಚಾಯಿತಿ ಸಿದ್ಧವಿದೆ. ಸಾರ್ವಜನಿಕರಿಗೆ ಹೋಗಿ ಬರಲು ದೂರವಾಗಿರುವುದೇ ಸಮಸ್ಯೆಯಾಗಿದೆನಾಗೇಶ, ಮುಖ್ಯಾಧಿಕಾರಿ ಪ.ಪಂ ಯಲಬುರ್ಗಾಅಗತ್ಯ ಸೌಲಭ್ಯಗಳೊಂದಿಗೆ ಸಾರಿಗೆ ಸಂಪರ್ಕ ಕಲ್ಪಿಸಿದರೆ ಕಾರ್ಯಕ್ರಮ ಆಯೋಜನೆಗೆ ಸಾರ್ವಜನಿಕರು ಮುಂದಾಗುತ್ತಾರೆ. ಈ ಬಗ್ಗೆ ಸಂಬಂಧಪಟ್ಟವರು ಕಾಳಜಿ ವಹಿಸಬೇಕುಗುಂಡನಗೌಡ, ಸಮಾಜದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.