ADVERTISEMENT

ಕೊಪ್ಪಳ: ‘ಧ್ಯಾನ ಮಂದಿರ’ದ ಸುತ್ತ ಅದ್ವಾನ

ಸರ್ಕಾರಕ್ಕೆ ಸೇರಿದ ವಾಲ್ಮೀಕಿ ಭವನದ ಸುತ್ತ ಮಡುಗಟ್ಟಿದ ಮಲೀನ

ನಾರಾಯಣರಾವ ಕುಲಕರ್ಣಿ
Published 17 ಡಿಸೆಂಬರ್ 2025, 7:31 IST
Last Updated 17 ಡಿಸೆಂಬರ್ 2025, 7:31 IST
ಕುಷ್ಟಗಿಯ ವಾಲ್ಮೀಕಿ ಧ್ಯಾನ ಮಂದಿರದ ಸುತ್ತಲಿನ ಪ್ರದೇಶ ಮಲೀನದಿಂದ ಕೂಡಿರುವುದು
ಕುಷ್ಟಗಿಯ ವಾಲ್ಮೀಕಿ ಧ್ಯಾನ ಮಂದಿರದ ಸುತ್ತಲಿನ ಪ್ರದೇಶ ಮಲೀನದಿಂದ ಕೂಡಿರುವುದು   

ಕುಷ್ಟಗಿ: ಪಟ್ಟಣದ ಗಜೇಂದ್ರಗಡ ರಸ್ತೆ ಬಳಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನದಲ್ಲಿರುವ ಧ್ಯಾನಮಂದಿರದ ಸುತ್ತಲಿನ ಪ್ರದೇಶ ಮಲೀನವಾಗಿ ಅದ್ವಾನಗೊಂಡಿದ್ದು ಮಹರ್ಷಿ ಪ್ರತಿಮೆಯ ದರ್ಶನಕ್ಕೆ ಬರುವ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ವಾಲ್ಮೀಕಿ ನಾಯಕ ಸಮುದಾಯದವರ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ದಶಕದ ಹಿಂದೆಯೇ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಿದೆ. ಸಮುದಾಯದವರು ಭವನದ ಒಳಗೆ ಮಹರ್ಷಿಯ ಆಕರ್ಷಕ ಪ್ರತಿಮೆ ಪ್ರತಿಷ್ಠಾಪಿಸಿದ್ದು ಭವನದ ಒಳ ಆವರಣವನ್ನು ಸ್ವಚ್ಛವಾಗಿರಿಸಿಕೊಂಡಿದ್ದಾರೆ. ನಂತರ ಭವನವನ್ನು ‘ಧ್ಯಾನ ಮಂದಿರ’ ಎಂದು ಪರಿವರ್ತಿಸಲಾಗಿದ್ದು ಪ್ರತಿನಿತ್ಯ ಮಹರ್ಷಿ ಪ್ರತಿಮೆಗೆ ಪೂಜೆಯನ್ನೂ ಸಲ್ಲಿಕೆಯಾಗುತ್ತಿದೆ. ಅದರ ಮೂಲಕ ಸಮುದಾಯದ ಜನರಲ್ಲಿ ಧಾರ್ಮಿಕ, ವೈಚಾರಿಕ ಭಾವನೆಗಳ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ಕೆಲ ಜನರು ಅಗತ್ಯ ದಿನಗಳಲ್ಲಿ ಮಹರ್ಷಿ ಮುಂದೆ ಕುಳಿತು ಧ್ಯಾನಗೈಯುವುದೂ ಉಂಟು.

ಇಷ್ಟೇ ಆಗಿದ್ದರೆ ಸರಿಯಾಗಿತ್ತು, ಆದರೆ ಸಮಸ್ಯೆ ಇರುವುದು ಭವನದ ಹೊರಗೆ, ಧ್ಯಾನ ಮಂದಿರ ಎಂದರೆ ಅದರ ಸುತ್ತಲಿನ ವಾತಾವರಣವೂ ನೈರ್ಮಲ್ಯದಿಂದ ಕೂಡಿರಬೇಕಿತ್ತು. ಅಲ್ಲಿಯ ಸ್ಥಿತಿ ಎಲ್ಲರೂ ತಿಳಿದುಕೊಂಡ ಹಾಗಿಲ್ಲ, ಮಂದಿರದ ಪಕ್ಕದಲ್ಲಿ ಪುರಸಭೆಯ ಬೃಹತ್‌ ಚರಂಡಿ ಇದ್ದು ಕಸಕಡ್ಡಿ, ಗಿಡಗಂಟಿಗಳು ಬೆಳೆದು ಕೊಳಚೆ ಹರಿಯುವುದಿಲ್ಲ ಮಲೀನ ವಾತಾವರಣ ಮಡುಗಟ್ಟಿದೆ.

ADVERTISEMENT

ಮಂದಿರದ ಮುಂದೆ ಅಕ್ಕಪಕ್ಕದಲ್ಲಿ ಅಕ್ಕಪಕ್ಕದ ಮನೆಗಳ ಬಚ್ಚಲು ನೀರು ಮಂದಿರದ ಮುಂದೆಯೇ ಹರಿಯುತ್ತಿದೆ. ಕೆಲ ವ್ಯಕ್ತಿಗಳು ಭವನದ ಮುಂದಿನ ಜಾಗವನ್ನು ಗಬ್ಬೆಬ್ಬಿಸಿರುವುದು ಕಂಡುಬರುತ್ತಿದೆ. ಧ್ಯಾನಮಂದಿರದ ಅನತಿ ದೂರದಲ್ಲಿ ಮದ್ಯದ ಅಂಗಡಿ, ಮಾಂಸದೂಟದ ಹೋಟೆಲ್‌, ಕಟ್ಟಿಗೆ ಕೊರೆಯುವ ಯಂತ್ರಗಳ ಸದ್ದು ಇಂಥಹ ಪ್ರದೇಶದ ಮಧ್ಯೆ ಧ್ಯಾನಮಂದಿರ ಚಟುವಟಿಕೆಗಳಿಗೆ ಧಕ್ಕೆ ತಂದಿವೆ. ಮದ್ಯ ವ್ಯಸನಿಗಳು ಅಕ್ಕಪಕ್ಕದಲ್ಲೇ ಠಿಕಾಣಿ ಹೂಡಿ ಅಸಭ್ಯವಾಗಿ ವರ್ತಿಸುವುದು ಇಲ್ಲಿ ಸಾಮಾನ್ಯ ಎಂಬ ದೂರು ಕೇಳಿಬಂದವು.

ನೈರ್ಮಲ್ಯ ವ್ಯವಸ್ಥೆ ಸುಧಾರಣೆಗೆ ಒತ್ತುವರಿ ತೆರವಿಗೆ ಮನವಿ ಮಾಡಿದರೂ ಪುರಸಭೆ ನಿರ್ಲಕ್ಷ್ಯವಹಿಸಿದೆ. ನಮ್ಮ ಸಮುದಾಯವರೇ ಅಧ್ಯಕ್ಷರಾದರೂ ಸಮಸ್ಯೆಗಳಿಗೆ ಉತ್ತರ ದೊರಕಿಲ್ಲ.
– ಮಾನಪ್ಪ ತಳವಾರ, ಅಧ್ಯಕ್ಷ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ 
ಧ್ಯಾನ ಮಂದಿರದ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಲು ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮಕ್ಕೆ ಮುಂದಾಗಲಿ
– ಹ.ಯ.ಈಟಿಯವರ, ಹಿರಿಯ ನಾಗರಿಕ
ವಾಲ್ಮೀಕಿ ಸಮುದಾಯ ಭವನದ ಪ್ರದೇಶದ ಮಾಲಿನ್ಯ ಸಮಸ್ಯೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸುತ್ತೇನೆ
– ವೆಂಕಪ್ಪ ಬೀಳಗಿ, ಪುರಸಭೆ ಮುಖ್ಯಾಧಿಕಾರಿ

ಒತ್ತುವರಿ ತೆರವು ಏಕಿಲ್ಲ?

ಸರ್ಕಾರದ ಈ ಕಟ್ಟಡದ ನಿರ್ವಹಣೆ ಪುರಸಭೆಗೆ ಸೇರಿದ್ದು ಸ್ವಚ್ಛತೆಗೆ ಗಮನಹರಿಸಿಲ್ಲ ಪುರಸಭೆ ಸಿಬ್ಬಂದಿ ಇತ್ತ ಬರುವುದಿಲ್ಲ. ಯಾವುದಾದರೂ ಸಭೆ ಸಮಾರಂಭ ಇದ್ದಾಗ ವಾಲ್ಮೀಕಿ ಸಮುದಾಯದವರು ಸ್ವತಃ ಸ್ವಚ್ಛಗೊಳಿಸುತ್ತಿರುತ್ತಾರೆ. ಈ ಬಗ್ಗೆ ಪುರಸಭೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನು ಈ ಸಮುದಾಯ ಭವನಕ್ಕೆ ಸೇರಿದ ಜಾಗ ಒತ್ತುವರಿಯಾಗಿದ್ದು ಹತ್ತಾರು ಬಾರಿ ಮನವಿ ಮಾಡಿದರೂ ಪುರಸಭೆಯವರು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.