ADVERTISEMENT

ಮಹರ್ಷಿ ನೈಜ ವ್ಯಕ್ತಿತ್ವ ಮರೆಮಾಚಿದ ಇತಿಹಾಸ: ಶಾಸಕ ದೊಡ್ಡನಗೌಡ ಪಾಟೀಲ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:32 IST
Last Updated 9 ಅಕ್ಟೋಬರ್ 2025, 5:32 IST
ಕುಷ್ಟಗಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ತಹಶೀಲ್ದಾರ್ ಅಶೋಕ.ವಿ.ಶಿಗ್ಗಾವಿ ಇತರರು ಹಾಜರಿದ್ದರು
ಕುಷ್ಟಗಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. ತಹಶೀಲ್ದಾರ್ ಅಶೋಕ.ವಿ.ಶಿಗ್ಗಾವಿ ಇತರರು ಹಾಜರಿದ್ದರು    

ಕುಷ್ಟಗಿ: ‘ಮನುಕುಲದ ದಾರಿ ದೀಪದಂತಿರುವ ರಾಮಾಯಣ ಮಹಾಕಾವ್ಯದ ಮೂಲಕ ದೊಡ್ಡ ಕೊಡುಗೆ ನೀಡಿರುವ ಮಹರ್ಷಿ ವಾಲ್ಮೀಕಿ ಅವರ ನೈಜ ವ್ಯಕ್ತಿತ್ವನ್ನು ಇತಿಹಾಸದ ಪುಟಗಳಲ್ಲಿ ಮರೆಮಾಚಲಾಗಿದ್ದು, ಆಗಿರುವ ತಪ್ಪುಗಳನ್ನು ಸರಿಪಡಿಸುವ ಪ್ರಯತ್ನ ನಡೆಬೇಕಿದೆ’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲ್ಲೂಕು ಆಡಳಿತ ಹಾಗೂ ವಾಲ್ಮೀಕಿ ನಾಯಕ ಸಮುದಾಯದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ವಾಲ್ಮೀಕಿ ಒಬ್ಬ ದಡ್ಡ, ದರೋಡೆಕೋರ ನಂತರ ನಾರದ ಮುನಿಯ ಮಾರ್ಗದರ್ಶನದಿಂದ ದೊಡ್ಡ ವ್ಯಕ್ತಿಯಾದ ಎಂದು ಹೇಳಲಾಗುತ್ತಿದೆ. ಅಂದರೆ ವಾಲ್ಮೀಕಿ ಬುದ್ಧಿವಂತನಾಗಿರಲಿಲ್ಲ ಎಂಬುದು ಎಷ್ಟರಮಟ್ಟಿಗೆ ಸರಿ ಎಂಬುದು ಚಿಂತನೆಗೆ ಒಳಪಡಬೇಕಿರುವ ಸಂಗತಿ’ ಎಂದರು.

ರಾಮಾಯಣ, ಮಹಾಭಾರತ ಸೇರಿದಂತೆ ಬಹುತೇಕ ಮಹಾಕಾವ್ಯಗಳು ರಚನೆಗೊಂಡಿದ್ದು ಶೂದ್ರ ಸಮುದಾಯದವರಿಂದಲೇ ಎಂಬುದು ವಿಶೇಷ. ಅಂತಹ ಇತಿಹಾಸವನ್ನು ಯುವಪೀಳಿಗೆ ತಿಳಿಯಬೇಕು. ಅಂದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು. ಅಲ್ಲದೆ ಪಟ್ಟಣದಲ್ಲಿ ಮುಂದಿನ ವರ್ಷದ ಜಯಂತಿ ವೇಳೆಗೆ ನಿರ್ಮಿಸಲು ಸಂಕಲ್ಪಿಸಿರುವ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿಯೂ ಹೇಳಿದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಶರಣಪ್ಪ ಪೂಜಾರ, ‘ವಾಲ್ಮೀಕಿ ಕಳ್ಳ, ಡಕಾಯಿತ ಎಂಬುದು ಸುಳ್ಳು ಎಂದು ನ್ಯಾಯಾಲಯಗಳ ತೀರ್ಪುಗಳು ಹೇಳುತ್ತವೆ. ಹಾಗಾಗಿ  ವಾಲ್ಮೀಕಿ ಮೊದಲು ಡಕಾಯಿತನಾಗಿದ್ದ ಎಂದು ಯಾರೇ ಹೇಳಿದರೂ ಉತ್ತರ ಪ್ರದೇಶ ರಾಜ್ಯದಲ್ಲಿ ಎಫ್‌ಐಆರ್‌ ದಾಖಲಾಗುತ್ತದೆ. ಅಂತಹ ವ್ಯವಸ್ಥೆ ಎಲ್ಲ ಕಡೆ ಬರಬೇಕಿದೆ’ ಎಂದರು.

ತಹಶೀಲ್ದಾರ್ ಅಶೋಕ ಶಿಗ್ಗಾಂವಿ, ಪ್ರಮುಖರಾದ ಕೆ.ಮಹೇಶ, ದೊಡ್ಡಬಸನಗೌಡ ಬಯ್ಯಾಪುರ, ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾನಪ್ಪ ತಳವಾರ, ರವಿಕುಮಾರ ಹಿರೇಮಠ ಇತರರು ಮಾತನಾಡಿದರು.

ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ಸದಸ್ಯ ವಸಂತ ಮೇಲಿನಮನಿ, ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ, ಬಿಇಒ ಉಮಾದೇವಿ, ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ನಜೀರಸಾಬ್ ಮೂಲಿಮನಿ, ಮಾಲತಿ ನಾಯಕ, ಶಶಿಧರ ಕವಲಿ, ದೇವಪ್ಪ ಗಂಗನಾಳ, ಚೌಡಪ್ಪ ಪೊಲೀಸಪಾಟೀಲ, ಪ್ರಾಚಾರ್ಯ ಎಸ್‌.ವಿ.ಡಾಣಿ, ಶಾಂತಪ್ಪ ಗುಜ್ಜಲ, ಆರ್‌.ಕೆ.ಸುಬೇದಾರ, ಬಾಲಪ್ಪ ನಾಯಕ, ಶಿವನಗೌಡ ನಾಯಕ ಇತರರು ಇದ್ದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವೀರಪ್ಪ ಸ್ವಾಗತಿಸಿದರು.

ಪ್ರಾರಂಭದಲ್ಲಿ ಪ್ರಮುಖ ಬೀದಿಗಳಲ್ಲಿ ಕುಂಭಮೇಳ, ವಾದ್ಯವೃಂದಗಳೊಂದಿಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು. ಇದೇ ಸಂದರ್ಭದಲ್ಲಿ ವಾಲ್ಮೀಕಿ ವೃತ್ತದ ಫಲಕ ಅನಾವರಣ, ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ವಾಲ್ಮೀಕಿ ಹಾಗೂ ವಿವಿಧ ಸಮುದಾಯಗಳ ಪ್ರಮುಖರು, ಯುವಕರು, ಮಹಿಳೆಯರು ಭಾಗವಹಿಸಿದ್ದರು. ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯ ಎಸ್‌.ವಿ.ಡಾಣಿ, ಪುರಸಭೆಯಲ್ಲಿ ಅಧ್ಯಕ್ಷ ಮಹಾಂತೇಶ ಕಲಭಾವಿ ವಾಲ್ಮೀಕಿ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಮಹರ್ಷಿಯಾಗುವ ಮೊದಲು ವಾಲ್ಮೀಕಿ ಕಳ್ಳ ಡಕಾಯಿತನಾಗಿದ್ದ ಎಂಬುದನ್ನು ಚರಿತ್ರೆಯಲ್ಲಿ ಚಿತ್ರಿಸಿರುವುದು ಕಪೋಲಕಲ್ಪಿತ.
-ಶರಣಪ್ಪ ಪೂಜಾರ, ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.