
ಕೊಪ್ಪಳ: ‘ಮೀಸಲಾತಿ ಪಡೆದುಕೊಳ್ಳುವ ವಿಚಾರದಲ್ಲಿ ನಮ್ಮವರೇ ಹಣ ಹಾಗೂ ಅಧಿಕಾರದ ಆಸೆಯಿಂದಾಗಿ ನಮಗೆ ಅಡ್ಡಿಯಾಗಿದ್ದಾರೆ. ಅಡ್ಡಗಾಲು ಹಾಕಿದವರು ಯಾರು ಎನ್ನುವುದು ಈಗಾಗಲೇ ಬಹಿರಂಗವಾಗಿದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಪಂಚ ಸೇನೆ ಸಂಘಟನೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ವೇಳೆ ಮಾತನಾಡಿದ ಅವರು ‘ಮೀಸಲಾತಿಗೆ ಹೋರಾಟ ಆರಂಭವಾದ ಡಿ. 23ರನ್ನು ರೈತ ದಿನ ಆಚರಣೆ ಮಾಡುತ್ತೇವೆ. ರಕ್ತ ಕೊಡುತ್ತೇವೆ. ಆದರೆ ಮೀಸಲಾತಿ ಬಿಡುವುದಿಲ್ಲ. ನಮ್ಮ ಹೋರಾಟ ಗ್ರಾಮೀಣ ಪ್ರದೇಶಗಳಿಂದ ನಿರಂತರವಾಗಿ ಮಾಡಲಾಗುತ್ತದೆ’ ಎಂದರು.
‘ನಾವು ನ್ಯಾಯಯುತವಾಗಿ ಹೋರಾಟ ಮಾಡಲಾಗುತ್ತಿದ್ದು, ದೇವರೇ ಮುಖ್ಯಮಂತ್ರಿಯವರು ಮನಸ್ಸು ಪರಿವರ್ತನೆ ಮಾಡಬೇಕು. ಮೀಸಲಾತಿ ಕೇಳುವವರು ಸಂವಿಧಾನ ವಿರೋಧಿ ಎಂದು ಹಲವರು ಸದನದಲ್ಲಿಯೇ ಹೇಳಿದ್ದಾರೆ’ ಎಂದರು.
ಸರ್ಕಾರದಲ್ಲಿರುವ ಪಂಚಮಸಾಲಿ ಸಚಿವರು ಸದನದಲ್ಲಿ ಮಾತನಾಡುತ್ತಿಲ್ಲವಲ್ಲ ಎನ್ನುವ ಪ್ರಶ್ನೆಗೆ ‘ಒಬ್ಬರು ಸಚಿವರು ಮೊದಲಿನಿಂದಲೂ ಮಾತನಾಡುತ್ತಿಲ್ಲ. ಇನ್ನೊಬ್ಬರು ನಮ್ಮ ಬೇಡಿಕೆಗೆ ಸ್ಪಂದಿಸುತ್ತಿದ್ದಾರೆ. ಹೋರಾಟದಿಂದ ನಮ್ಮ ಸಮುದಾಯದ ಶಾಸಕರ ಸಂಖ್ಯೆ ಹೆಚ್ಚಾಗಬೇಕಿದೆ. ನನ್ನ ಹೋರಾಟವನ್ನು ಬಳಸಿಕೊಂಡು ಬೇರೆಯವರು ಉದ್ಧಾರ ಆಗಿದ್ದಾರೆ. ನಾವು ಸಮುದಾಯದ ಗುರುಗಳಾಗಿದ್ದು, ಎಂದಿಗೂ ಮಾಜಿ ಆಗುವುದಿಲ್ಲ. ಸಮಾಜದ ಋಣ ತೀರಿಸುತ್ತೇನೆ’ ಎಂದು ಹೇಳಿದರು.
ಮಾಜಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಪಂಚಸೇನೆಯ ರಾಜ್ಯಾಧ್ಯಕ್ಷ ರುದ್ರಗೌಡ ವಿ. ಸೋಲಬಗೌಡ್ರ, ಜಿಲ್ಲಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ಸಮಾಜದ ಮುಖಂಡರಾದ ಶರಣಪ್ಪ ಶೀಲವಂತರ, ರವೀಂದ್ರ ತೋಟದ, ವಿಜಯನಗರ ಜಿಲ್ಲಾಧ್ಯಕ್ಷ ವೀರೇಶ ಎಂ.ಬಿ., ಮಂಜುನಾಥ ಸೊರಟೂರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.