ADVERTISEMENT

‘ಎನ್‌ಡಿಆರ್‌ಎಫ್‌ ಮೊತ್ತ ಪರಿಷ್ಕರಣೆ ಯಾಕಿಲ್ಲ’- ರೈತ ನಾಯಕರ ಪ್ರಶ್ನೆ

ಪರಿಹಾರವೂ ಇಲ್ಲ, ನೀರೂ ಇಲ್ಲವೆಂದರೆ ಹೇಗೆ: ರೈತ ನಾಯಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 7:56 IST
Last Updated 2 ನವೆಂಬರ್ 2025, 7:56 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಕೊಪ್ಪಳ: ’ಹಿಂದಿನ ಹಲವು ವರ್ಷಗಳಲ್ಲಿ ಕಾಲಕಾಲಕ್ಕೆ ಎಲ್ಲರ ವೇತನ ಪರಿಷ್ಕರಣೆಯಾಗಿದೆ. ಆದರೆ ಪ್ರಾಕೃತಿಕ ವಿಪತ್ತು ಸಂಭವಿಸಿ ಬೆಳೆ ನಷ್ಟವಾದಾಗ ನೀಡುವ ಎನ್‌ಡಿಆರ್‌ಎಫ್‌ ಪರಿಹಾರದ ಮೊತ್ತದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ ಯಾಕೆ’ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರಶ್ನಿಸಿದರು.

‘ಈಗಿನ ರಾಜಕೀಯ ವ್ಯವಸ್ಥೆಯಿಂದಾಗಿ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಸಾಲವನ್ನು ರಾಜ್ಯ ಹಾಗೂ ಕೇಂದ್ರ ಶೇ. 50ರಷ್ಟು ವೆಚ್ಚ ಭರಿಸಿ ಸಂಪೂರ್ಣ ಮನ್ನಾ ಮಾಡಬೇಕು. ಗ್ಯಾರಂಟಿ ಯೋಜನೆಯ ಅನ್ನಭಾಗ್ಯ, ವಿದ್ಯಾರ್ಥಿಗಳಿಗೆ, ಕೈದಿಗಳಿಗೆ ಊಟ ಮತ್ತು ಅಪೌಷ್ಠಿಕತೆ ನಿವಾರಣೆಗೆ ನೀಡಲಾಗುವ ಪೌಷ್ಠಿಕಾಂಶ ಆಹಾರ ಉತ್ಪನ್ನಗಳನ್ನು ರಾಜ್ಯ ಸರ್ಕಾರ ನೇರವಾಗಿ ರೈತರಿಂದಲೇ ಖರೀದಿ ಮಾಡಿದರೆ ರೈತರಿಗೆ ಶಕ್ತಿ ಬಂದಂತೆ ಆಗುತ್ತದೆ’ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ ‘ಅತಿವೃಷ್ಟಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಬೆಳೆಗೆ ಹಾನಿಯಾಗಿದ್ದರೂ ಸರ್ಕಾರಗಳು ಸಮರ್ಪಕ ಪರಿಹಾರ ಒದಗಿಸಿಲ್ಲ. ಅತ್ತ ಬೆಳೆ ಪರಿಹಾರವೂ ಇಲ್ಲ; ಇತ್ತ ತುಂಗಭದ್ರಾ ಜಲಾಶಯ ವ್ಯಾಪ್ತಿಯ ಜಿಲ್ಲೆಗಳಿಗೆ ಎರಡನೇ ಬೆಳೆಗೆ ನೀರು ಕೂಡ ಇಲ್ಲವೆಂದರೆ ಹೇಗೆ’ ಎಂದು ಪ್ರಶ್ನಿಸಿದರು.

ADVERTISEMENT

‘ಮೂರು ತಿಂಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಲು ಸಾಧ್ಯವಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಎರಡನೇ ಬೆಳೆಗೆ ನೀರು ಪಡೆದ ಬಳಿಕ ಮಾರ್ಚ್‌ನಲ್ಲಿ ಗೇಟ್‌ಗಳನ್ನು ಅಳವಡಿಸಿ ಈಗ ನೀರು ಕೊಡಬೇಕು. ಕಾರ್ಖಾನೆಗಳ ಮಾಲಿನ್ಯದಿಂದ ಜಲಾಶಯದ ನೀರು ಕೂಡ ಕಲುಷಿತಗೊಂಡಿದೆ. ಇಲ್ಲಿನ ಪರಿಸರಕ್ಕೆ ವ್ಯಾಪಕ ಹಾನಿಯಾಗುತ್ತಿದ್ದು ಯಾವುದೇ ಕಾರ್ಖಾನೆಗಳಿಗೆ ವಿಸ್ತರಣೆಗೆ ಅವಕಾಶ ಕೊಡಬಾರದು’ ಎಂದು ಆಗ್ರಹಿಸಿದರು.

ಸಂಘದ ಕಾರ್ಯಾಧ್ಯಕ್ಷ ಜೆ.ಎಂ‌.ವೀರಸಂಗಯ್ಯ, ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಹಾಗೂ ಎನ್‌.ಡಿ. ವಸಂತಕುಮಾರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.