
ಕೊಪ್ಪಳದಲ್ಲಿ ಗುರುವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು
ಕೊಪ್ಪಳ: ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ನಡೆದ ಸಂವಾದದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ವಿದ್ಯಾರ್ಥಿಗಳಿಗೆ ಬದುಕಿನ ಯಶಸ್ಸಿನ ಗುಟ್ಟುಗಳನ್ನು ಹೇಳಿಕೊಟ್ಟರು. ಜೀವನದಲ್ಲಿ ಔನ್ಯತ್ಯ ಸಾಧಿಸಲು ಶಿಕ್ಷಣದ ಮಹತ್ವವನ್ನು ಸಾರಿ ಹೇಳಿದರು.
‘ಅರಿವೇ ಬದುಕು, ಅಜ್ಞಾನವೇ ಸಾವು ಎಂಬ ಮಾತಿನಂತೆ ಶಿಕ್ಷಣದಿಂದ ಮಾತ್ರ ನಮಗೆ ಪ್ರಪಂಚದ ಜ್ಞಾನ ಬೆಳೆಯಲು ಸಾಧ್ಯ. ಶಿಕ್ಷಣವನ್ನು ಶಕ್ತಿಯಾಗಿಸಿಕೊಂಡು ಪರಿಶ್ರಮದಿಂದ ಯಶಸ್ವಿಯಾಗಬಹುದು. ಮಹಿಳೆಯರು ಸುಶಿಕ್ಷಿತರಾಗಲೇಬೇಕು’ ಎಂದು ಕಿವಿಮಾತು ಹೇಳಿದರು.
‘ಶಿಕ್ಷಣ ನಮಗೆ ಜ್ಞಾನ ನೀಡುತ್ತದೆ. ಪ್ರಪಂಚದ ಆಗುಹೋಗುಗಳನ್ನು ಪರಿಚಯಿಸುತ್ತದೆ. ನಮ್ಮ ಹಕ್ಕುಗಳು, ಕರ್ತವ್ಯ, ಜವಾಬ್ದಾರಿಯ ಬಗ್ಗೆ ತಿಳಿಸುತ್ತದೆ. ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರೂ ಕಡ್ಡಾಯವಾಗಿ ಶಿಕ್ಷಣ ಪಡೆಯಲೇಬೇಕು. ಶಿಕ್ಷಣವನ್ನು ಶಕ್ತಿಯಾಗಿ ಬಳಸಿಕೊಳ್ಳಬೇಕು. ಓದುವ ವಯಸ್ಸಿನಲ್ಲಿ ಅನಗತ್ಯ ಆಕರ್ಷಣೆ, ಆಮಿಷಕ್ಕೆ ಒಳಗಾಗದೇ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡಬೇಕು’ ಎಂದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ತಮ್ಮ ಊರು, ಕಾಲೇಜಿನಲ್ಲಿರುವ ಮೂಲಸೌಕರ್ಯದ ಕೊರತೆಗಳ ಬಗ್ಗೆ ದೂರು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ವೈ.ಶೆಟ್ಟೆಪ್ಪನವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ಮೂರುದಿನಗಳ ಪ್ರವಾಸ ಕೈಗೊಂಡಿರುವ ಅಧ್ಯಕ್ಷೆ
ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರಿಕೆ ವಹಿಸಿ
ಮೂಲ ಸೌಕರ್ಯಗಳ ಬಗ್ಗೆ ಸಮಸ್ಯೆ ಹಂಚಿಕೊಂಡ ವಿದ್ಯಾರ್ಥಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.