ಕುಷ್ಟಗಿ: ಆರ್ಥಿಕ ಸ್ವಾವಲಂಬನೆ ಮಹಿಳೆಯರಲ್ಲಿನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಮತ್ತು ಅವರ ಸಬಲೀಕರಣಕ್ಕೆ ಸಹಕಾರಿ ಆಗುತ್ತದೆ ಎಂದು ಪಟ್ಟಣದ ಎಸ್‌ವಿಸಿ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಬಸವರಾಜ ಚಂದ್ರಶೇಖರ ಹೇಳಿದರು.
ಬೆಂಗಳೂರಿನ ರಿಚ್ ಮಚ್ ಹೈಯರ್ ಅಕಾಡೆಮಿಕ್ ಫೌಂಡೇಶನ್ ಮತ್ತು ಇಂಟೆಲ್ ಸಂಸ್ಥೆ ವತಿಯಿಂದ ಇಲ್ಲಿಯ ಎಸ್‌ವಿಸಿ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹಮ್ಮಿಕೊಂಡಿರುವ ಬ್ಯೂಟಿಷಿಯನ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಭವಿಷ್ಯದ ಬದುಕಿಗೆ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಅಗತ್ಯವಾಗಿದೆ’ ಎಂದರು.
ಎಸ್‌ವಿಸಿ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಜಗದೀಶ ಅಂಗಡಿ ಮಾತನಾಡಿ, ‘ದೇಶದ ಸದೃಢತೆಯಲ್ಲಿ ಮಹಿಳೆಯರ ಕೊಡುಗೆಯೂ ಅಪಾರವಾಗಿದೆ. ಹಣದ ಉಳಿತಾಯ ಮತ್ತು ಆರ್ಥಿಕ ಕ್ಷೇತ್ರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮಹಿಳೆಯರು ಪುರುಷರಿಗಿಂತಲೂ ನಿಪುಣರು ಎಂಬುದನ್ನು ಅನೇಕ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ’ ಎಂದು ಹೇಳಿದರು.
ವಿಜ್ಞಾನ ಮತ್ತು ವಾಣಿಜ್ಯ ಕಾಲೆಜಿನ ಪ್ರಾಚಾರ್ಯ ಭೀಮಸೇನ ಆಚಾರ, ತರಬೇತಿ ಉದ್ದೇಶ ಮತ್ತು ಭವಿಷ್ಯದಲ್ಲಿ ಮಹಿಳೆಯರಿಗೆ ದೊರೆಯುವ ಪ್ರಯೋಜನ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನಂತರ ಅಗತ್ಯ ಸಲಕರಣೆ (ಕಿಟ್) ಉಚಿತವಾಗಿ ನೀಡುವ ಕುರಿತು ವಿವರಿಸಿದರು.
ಪ್ರೌಢಶಾಲೆ ಮುಖ್ಯಶಿಕ್ಷಕ ಭೀಮರಾವ ಕುಲಕರ್ಣಿ ಮಾತನಾಡಿ, ಬ್ಯೂಟಿಷಿಯನ್ ಕೋರ್ಸ್ ತರಬೇತಿಯನ್ನು ಖಾಸಗಿಯಾಗಿ ಪಡೆಯಬೇಕಾದರೆ ಬಹಳಷ್ಟು ಶುಲ್ಕ ತೆರಬೇಕಾಗುತ್ತದೆ. ಆದರೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ನೀಡಲಾಗುತ್ತಿರುವ ತರಬೇತಿ ಪ್ರಯೋಜನವನ್ನು ಮಹಿಳೆಯರು ಪಡೆಯಬೇಕು ಎಂದರು.
ಸುಜಾತಾ ಗಿರಿಸಾಗರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.