ಗಂಗಾವತಿ: ಹೊಟ್ಟೆ ಹಸಿದವರಿಗೆ ಮಧ್ಯಾಹ್ನದ ಊಟಕ್ಕೆ ರೊಟ್ಟಿ, ಕಾಳುಪಲ್ಯೆ, ಬದನೆಕಾಯಿ, ಪುಡಿ, ಚಟ್ನಿ, ಸೊಪ್ಪು, ಈರುಳ್ಳಿ, ಮಿರ್ಚಿ, ಅನ್ನ, ಸಾಂಬರ್, ಸಂಡಿಗೆ, ಮಜ್ಜಿಗೆ ಸೇರಿದ ರುಚಿಕರ ಊಟ ಯಾರು ತಾನೇ ಸವಿಯಲ್ಲ ಹೇಳಿ. ಇದೆ ಊಟವನ್ನು ನಿತ್ಯ ಕಡಿಮೆ ಬೆಲೆಗೆ ನೀಡುತ್ತಾ ನೂರಾರು ಗ್ರಾಹಕರ ಪಾಲಿಗೆ ಅನ್ನಪೂರ್ಣೇಶ್ವರಿ ಆಗಿದ್ದಾರೆ ‘ಹೋಟೆಲ್ ಜಯಮ್ಮ’.
ನಗರದ ಎಪಿಎಂಸಿಯಲ್ಲಿನ ಬಿಎಸ್ಎನ್ಎಲ್ ಕಚೇರಿ ಬಳಿ ಮಧ್ಯಾಹ್ನ ಹೋದರೆ ಸಾಕು ಜಯಮ್ಮ ಅವರ ಅಂಗಡಿ ಬಳಿ ರುರುಚಿಕರವಾದ ಅನಿಯಮಿತ ಊಟ ಮಾಡಲು ನೂರಾರು ಗ್ರಾಹಕರು ಸೇರಿರುವುದು ಕಂಡುಬರುತ್ತದೆ.
ಜಯಮ್ಮ ಅವರು ಕಳೆದ 18 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದು ಇಲ್ಲಿನ ಅಡುಗೆಯ ರುಚಿಗೆ ಮನಸೋಲದವರಿಲ್ಲ. ಹಮಾಲರು, ಸರ್ಕಾರಿ ನೌಕರಸ್ಥರು, ಫೈನಾನ್ಸ್ ಸಿಬ್ಬಂದಿ, ಯುವಕರು, ದಲ್ಲಾಳಿಗಳು ಎಷ್ಟೇ ಕೆಲಸವಿರಲಿ, ಎಲ್ಲೆಯಿರಲಿ, ಮಧ್ಯಾಹ್ನದ ಊಟಕ್ಕೆ ಜಯಮ್ಮ ಹೋಟೆಲ್‌ಗೇ ಬರುತ್ತಾರೆ.
ಊಟ ಬೇಕು ಅಂತ ಮುಂಗಡವಾಗಿ ತಿಳಿಸಿದರೇ 30–70 ಜನರಿಗೆ ಊಟ ತಯಾರಿಸಿ ಕಡಿಮೆ ಬೆಲೆಗೆ ನೀಡುವ ವ್ಯವಸ್ಥೆಯೂ ಇದೆ. ಇಲ್ಲಿ ಗ್ರಾಹಕರು ತಮಗೇನು ಬೇಕು ಅದನ್ನು ಅವರೇ ಬಡಿಸಿಕೊಳ್ಳಬಹುದು.
ಮನೆಯಲ್ಲಿ ಅಮ್ಮನಂತೆ ಎಲ್ಲರಿಗೂ ಕೇಳಿಕೇಳಿ ಊಟ ನೀಡುವ ಜಯಮ್ಮ, ನಗುಮೊಗದಿಂದಲೇ ಸ್ವಾಗತಿಸುವ ಸಿಬ್ಬಂದಿ ಗ್ರಾಹಕರಿಗೆ ಅಚ್ಚುಮೆಚ್ಚಾಗಿದ್ದಾರೆ.
ಊಟದಲ್ಲಿ ಸ್ಪೇಷಲ್‌ಗಳೇನು: ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನ ಹೋಟೆಲ್ ತೆರೆದಿರುತ್ತದೆ. ವಾರಾಂತ್ಯದಲ್ಲಿ ಹೆಸರು ಕಾಳು, ಆಲಸಂದೆ, ಮಡಿಕೆ ಕಾಳು, ರೊಟ್ಟಿ, ಚಪಾತಿ, ಬದನೆಕಾಯಿ, ಆಲೂಪಲ್ಯೆ, ಅನ್ನ, ಸಾಂಬರ್, ಮಿರ್ಚಿ, ಚಟ್ನಿ, ಪುಡಿ, ಮಜ್ಜಿಗೆಯ ಊಟ ಇರುತ್ತದೆ. ಮಂಗಳವಾರ, ಶುಕ್ರವಾರ ಶೇಂಗಾ ಮತ್ತು ಹೂರಣದ ಹೋಳಿಗೆ ಇರಲಿದ್ದು ಬಿಸಿಬಿಸಿಯಾಗಿಯೇ ನೀಡಲಾಗುತ್ತಿದೆ.
₹70ಗೆ ಅನಿಯಮಿತ ಊಟ: 2 ರೊಟ್ಟಿ, ಕಾಳುಪಲ್ಯೆ, ಬದನೆಕಾಯಿ,ಚಟ್ನಿ, ಸೊಪ್ಪು, ಈರುಳ್ಳಿ, ಮಿರ್ಚಿ, ಅನ್ನ, ಸಾಂಬರ್, ಮಜ್ಜಿಗೆಯ ಅನಿಯಮಿತ ಊಟಕ್ಕೆ ₹70, 2 ರೊಟ್ಟಿ, ಅರ್ಧ ರೈಸ್ ಜೊತೆಗೆ ಪಲ್ಯೆ, ಸಾಂಬರ್, ಚಟ್ನಿ, ಈರುಳ್ಳಿ, ಸೊಪ್ಪಿನ ಊಟಕ್ಕೆ ₹50, ಅನಿಯಮಿತ ಅನ್ನ, ಸಾಂಬರ್ ಜೊತೆಗೆ ಪಲ್ಯೆ, ಚಟ್ನಿ, ಸೊಪ್ಪು, ಈರುಳ್ಳಿ, ಮಜ್ಜಿಗೆಗೆ ₹50 ಇದೆ. ನಿತ್ಯ 800ಕ್ಕೂ ಅಧಿಕ ಗ್ರಾಹಕರು ಹೊಟ್ಟೆ ತುಂಬ ಊಟ ಮಾಡುತ್ತಾರೆ.
10 ಜನ ಕೆಲಸ: ಸ್ವಂತ ಉದ್ಯಮ ಮಾಡಿ ಇತರಿಗೆ ಕೆಲಸ ನೀಡಲು ಆಗದ ಈ ಕಾಲದಲ್ಲಿ ಜಯಮ್ಮ ನಿತ್ಯ 7 ಜನ ಮಹಿಳೆಯರಿಗೆ, 3 ಜನ ಪುರುಷರಿಗೆ ಕೆಲಸ ನೀಡುತ್ತಿದ್ದಾರೆ. ಪುರುಷರು ಕುಡಿಯುವ ನೀರಿನ ವ್ಯವಸ್ಥೆ, ಕುರ್ಚಿ ಹಾಕುವುದು, ಊಟ ನೀಡುವುದು ಕೆಲಸ ಮಾಡಿದರೇ, ಮಹಿಳೆಯರದ್ದು ಅಡುಗೆ ತಯಾರಿ ಹೊಣೆ. ನಿತ್ಯ ₹300 ಕೂಲಿ ನೀಡುತ್ತಿದ್ದು ಹೆಚ್ಚು ಲಾಭವಾದಾಗ ಹೆಚ್ಚುವರಿ ₹50 ಕೊಡುತ್ತಾರೆ.
ಅಡುಗೆ ತಯಾರಿಕೆಗೆ ₹15 ಸಾವಿರ ಖರ್ಚು: ನಿತ್ಯ 50 ಕೆ.ಜಿ ಅನ್ನ, 600 ಮಿರ್ಚಿ, 600 ರೊಟ್ಟಿ, 5 ದೊಡ್ಡ ಕುಕ್ಕರ್‌ನಲ್ಲಿ ಸಾಂಬರ್, 10 ಕೆಜಿ ಈರುಳ್ಳಿ (ತಿನ್ನಲು), 10 ಕೆ.ಜಿ ಬದನೆಕಾಯಿ ಪಲ್ಯೆ, ಕಾಳುಪಲ್ಯೆ, 400 ಶೇಂಗಾ ಹೋಳಿಗೆ, 10 ಲೀಟರ್ ಮೊಸರು, 10 ಕ್ಯಾನ್ ಶುದ್ದ ಕುಡಿಯುವ ನೀರು, 1 ಸಿಲೆಂಡರ್ ಖರ್ಚಾಗುತ್ತದೆ. ತರಕಾರಿ, ಕಿರಾಣಿ ಸೇರಿ ನಿತ್ಯ ₹15 ರಿಂದ ₹16 ಸಾವಿರ ಖರ್ಚು ಬರಲಿದೆ. ಎಲ್ಲ ಖರ್ಚು ತೆಗೆದು ₹1 ಸಾವಿರದಿಂದ₹2 ಸಾವಿರ ಉಳಿತಾಯವಾಗಲಿದೆ ಎನ್ನುತ್ತಾರೆ ಜಯಮ್ಮ.
ಜಯಮ್ಮ ಅವರಿಗೆ ಅಂಗವಿಕಲ ಪುತ್ರನಿದ್ದು ತಾಯಿಯೊಂದಿಗೆ ಹೊಟೇಲ್ ಕೌಂಟರ್‌ನಲ್ಲಿ ಕುಳಿತು ಗ್ರಾಹಕರಿಂದ ಬಿಲ್ ಪಡೆಯುತ್ತಾರೆ.
ಉಪಾಹಾರದಿಂದ ಊಟದವರೆಗೆ...
ಮೆಹಬೂಬ್ ನಗರದ ನಿವಾಸಿಯಾದ ಜಯಮ್ಮ ಅವರ ತಾಯಿ ಅಂಬಮ್ಮ 18 ವರ್ಷಗಳ ಹಿಂದೆ ಕೊಪ್ಪಳ ರಸ್ತೆಯಲ್ಲಿನ ಬಿ.ಇಡಿ ಕಾಲೇಜು ಬಳಿ ಉಪಜೀವನಕ್ಕೆ ಹೋಟೆಲ್ ಆರಂಭಿಸಿದ್ದರು. ಅಲ್ಲಿ ಹೊಟೇಲ್ ಮುಚ್ಚಿದ ನಂತರ ಅಂಬಮ್ಮ ಮತ್ತು ಮಗಳು ಜಯಮ್ಮ ನಿತ್ಯ ಬೆಳಿಗ್ಗೆ ಎಪಿಎಂಸಿಗೆ ದೋಸೆ, ಪಡ್ಡು, ಬಜ್ಜಿ ತಂದು ಹಮಾಲರಿಗೆ ಮಾರುತ್ತಿದ್ದರು.
ಮಧ್ಯಾಹ್ನದ ಸಮಯಕ್ಕೆ ಮತ್ತೆ ಅನ್ನ, ಸಾಂಬರ್, ಚಿತ್ರಾನ್ನ ತಂದು ವ್ಯಾಪಾರ ಮಾಡುತ್ತಾ ಎಪಿಎಂಸಿಯಲ್ಲಿಯೇ ಚಿಕ್ಕ ಅಂಗಡಿಯಲ್ಲಿ ಹೊಟೇಲ್ ಆರಂಭಿಸಿ ಇಂದು ನಿತ್ಯ 800 ಜನರು ಊಟ ಮಾಡುವ ಮಟ್ಟಕ್ಕೆ ವ್ಯಾಪಾರ ವೃದ್ಧಿಸಿಕೊಂಡು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.
ಮನೆಯಲ್ಲಿ ತಾಯಿಯ ಕೈ ರುಚಿ ಹೇಗಿರುತ್ತದೋ ಅಷ್ಟೇ ರುಚಿ ಮತ್ತು ಗುಣಮಟ್ಟದ ಊಟ ಜಯಮ್ಮ ಅವರ ಹೊಟೇಲ್‌ನಲ್ಲಿ ಸಿಗುತ್ತದೆ. ಬೆಲೆಯೂ ಕಡಿಮೆ ಇರುತ್ತದೆ. ನಿತ್ಯ ಇಲ್ಲಿ ಊಟ ಮಾಡುವವರಿಗೆ ₹10 ಕಡಿಮೆ ತೆಗೆದುಕೊಳ್ಳುತ್ತಾರೆ ವಿನಯಕುಮಾರ, ಫೈನಾನ್ಸ್ ಸಿಬ್ಬಂದಿ, ಗಂಗಾವತಿ ಜಯಮ್ಮ ಅವರ ಹೋಟೆಲ್‌ನಲ್ಲಿ ಮಾಡುವ ಊಟ ಖಾನವಳಿಯಲ್ಲಿ ಮಾಡಿದರೇ ₹100 ರಿಂದ ₹150 ತೆಗೆದುಕೊಳ್ಳುತ್ತಾರೆ. ಹಣ ಇಲ್ಲದಿದ್ದರೆ ನಾಳೆ ಕೊಡು ಎನ್ನುತ್ತಾರೆ. ಗಂಗಾವತಿಯಲ್ಲಿ ಸಾಕಷ್ಟು ಹೋಟೆಲ್, ಖಾನಾವಳಿಗಳಿದ್ದು ಇಲ್ಲಿನ ಊಟ ತುಂಬಾ ರುಚಿಯಾಗಿರುತ್ತದೆ ಮಂಜುನಾಥ, ಹಮಾಲಿ ಕೆಲಸಗಾರ, ಗಂಗಾವತಿ ನಮ್ಮ ತಾಯಿ ತನಗಿಲ್ಲದಿದ್ದರೂ ಬೇರೆಯವರಿಗೆ ಊಟ ಕೊಡುತ್ತಿದ್ದಳು. ಸತ್ತ ನಂತರ ನಮ್ಮ ಹಿಂದೆ ಏನೂ ಬರುವುದಿಲ್ಲ. ಹೀಗಾಗಿ ತಾಯಿ ಹಾಕಿದ ಹಾದಿಯಲ್ಲೇ ಸಾಗುತ್ತಾ ನಾಲ್ವರಿಗೆ ಕಡಿಮೆ ಬೆಲೆಗೆ ಹೊಟ್ಟೆ ತುಂಬ ಊಟ ನೀಡುವ ಕಾಯಕ ಮಾಡುತ್ತಿದ್ದೇನೆ,ಜಯಮ್ಮ, ಹೊಟೇಲ್ ಮಾಲಕಿ
ಜಯಮ್ಮ ಅವರ ಹೋಟೆಲ್‌ನಲ್ಲಿ ಮಾಡುವ ಊಟ ಖಾನವಳಿಯಲ್ಲಿ ಮಾಡಿದರೇ ₹100 ರಿಂದ ₹150 ತೆಗೆದುಕೊಳ್ಳುತ್ತಾರೆ. ಹಣ ಇಲ್ಲದಿದ್ದರೆ ನಾಳೆ ಕೊಡು ಎನ್ನುತ್ತಾರೆ. ಗಂಗಾವತಿಯಲ್ಲಿ ಸಾಕಷ್ಟು ಹೋಟೆಲ್, ಖಾನಾವಳಿಗಳಿದ್ದು ಇಲ್ಲಿನ ಊಟ ತುಂಬಾ ರುಚಿಯಾಗಿರುತ್ತದೆಮಂಜುನಾಥ, ಹಮಾಲಿ ಕೆಲಸಗಾರ, ಗಂಗಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.