
ಕೊಪ್ಪಳ: ‘ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಈ ಕಾರ್ಯಾಗಾರ ಹಮ್ಮಿಕೊಂಡಿದ್ದು ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು’ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬೆಂಗಳೂರಿನ ಪ್ರಭಾರ ಅಧ್ಯಕ್ಷ ಎನ್.ಎಸ್. ಪಾಟೀಲ ಹೇಳಿದರು.
ಇಲ್ಲಿನ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸರ್ಕಾರಿ ಭೂಮಿ ಉಳಿಸಬೇಕಾದರೆ ಭೂ ಕಬಳಿಕೆ ತಪ್ಪಿಸಬೇಕಿದೆ. ಭೂ ಕಬಳಿಕೆಯಾದರೆ ಏನು ಮಾಡಬೇಕು. ಹೇಗೆ ಕೇಸ್ ಹಾಕಬೇಕು ಎಂಬುದರ ಕುರಿತು ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಗಳು ಬಂದಿದ್ದಾರೆ. ಇದರಲ್ಲಿ ತಮ್ಮ ಅಭಿಪ್ರಾಯ ತಿಳಿಸುವುದು ಬಹಳ ಮುಖ್ಯವಿದೆ. ಭೂ ಕಬಳಿಕೆ ನಿಷೇಧ ಕಾನೂನಿನ ಕುರಿತು ಅಧಿಕಾರಿಗಳಿಗೆ ಪರಿಪೂರ್ಣ ಮಾಹಿತಿ ಇರಬೇಕು’ ಎಂದರು.
‘2016 ರಿಂದ ಈವರೆಗೆ 23,849 ಪ್ರಕರಣಗಳನ್ನು ತಿದ್ದುಪಡಿ ಆಧಾರದ ಮೇಲೆ ಇತ್ಯರ್ಥಪಡಿಸಲಾಗಿದೆ. 4,786 ಪ್ರಕರಣಗಳು ಬಾಕಿ ಇದ್ದು, 4585 ಎಕರೆ 6 ಗುಂಟೆ ಸರ್ಕಾರಿ ಜಮೀನಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. 133 ಜನರಿಗೆ ಶಿಕ್ಷೆಯಾಗಿ ಕಾರಾಗೃಹವಾಸ ಮತ್ತು ದಂಡ ವಿಧಿಸಲಾಗಿದೆ’ ಎಂದರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಸಿ. ಚಂದ್ರಶೇಖರ ಮಾತನಾಡಿ, ‘ಭೂ ಕಬಳಿಕೆ, ಅದರ ವ್ಯಾಖ್ಯಾನ ಸಾರ್ವಜನಿಕರಲ್ಲಿ ಸೀಮಿತವಾಗಿದೆ. ಕೆರೆ, ಅರಣ್ಯ, ನದಿ ಒತ್ತುವರಿಯಾಗಿದೆ. ಭೂ ಕಬಳಿಕೆಯಾದ ನಂತರ ಯಾವ ಕ್ರಮ ತೆಗೆದುಕೊಳ್ಳಬೇಕು. ಶಿಕ್ಷೆ ವಿಧಿಸುವ ಮತ್ತು ಅದನ್ನು ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಭೂ ಕಬಳಿಕೆ ಚಟುವಟಿಕೆ ನಿಷೇಧ ಹಾಗೂ ಭಾದಿತರನ್ನು ರಕ್ಷಿಸಿ ಮರಳಿ ಅವರಿಗೆ ನೀಡುವುದು ಮತ್ತು ಅಕ್ರಮ ಸಂಪತ್ತಿನ ಸಂಗ್ರಹ ತಡೆಯುವುದಾಗಿದೆ’ ಎಂದರು.
‘ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಿನ್ನಾಳ ಗ್ರಾಮವನ್ನು ದತ್ತು ಸ್ವೀಕರಿಸಿ ಜಿಲ್ಲಾಡಳಿತದಿಂದ ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿದ್ದೇವೆ. ಅಲ್ಲಿಯೂ ಕೆಲವು ಕಡೆ ಭೂ ಕಬಳಿಕೆಯಾಗಿದ್ದು ಸೊಮೊಟೊ ದಾಖಲಿಸಲಾಗಿದೆ’ ಎಂದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಮಾತನಾಡಿ, ‘ಭೂ ಕಬಳಿಕೆ ಸರ್ಕಾರಿ ಜಮೀನು ಮಾತ್ರವಲ್ಲದೆ, ಮುಜರಾಯಿ, ವಕ್ಫ್ ಎಲ್ಲದಕ್ಕೂ ಅನ್ವಯವಾಗುತ್ತದೆ. ನಮ್ಮ ಅಧಿಕಾರಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ದರಗದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್.ಎಲ್. ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಡಿ.ಕೆ. ಕುಮಾರ, ಸರಸ್ವತಿದೇವಿ, ಮಲಕರಿ ರಾಮಪ್ಪ ಒಡಿಯರ್, ಭಾಗಲಕ್ಷ್ಮೀ, ತ್ರಿವೇಣಿ ಈಳಿಗೇರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೃಷ್ಣ ಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.