ಯಲಬುರ್ಗಾ: ಪಟ್ಟಣದ ಎರಡನೇ ವಾರ್ಡಿನ ಕಂಡೇರ್ ಓಣಿಯ ಕಾಮನಕಟ್ಟಿಯಲ್ಲಿ ಭಗತ್ ಸಿಂಗ್ ಯುವಕ ಮಂಡಳಿಯ ವತಿಯಿಂದ ಗಣೇಶ ಚತುರ್ಥಿ ಆಚರಣೆಯ ಮುಕ್ತಾಯ ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ಜರುಗಿತು.
ಆಚರಣೆ ಪ್ರಯುಕ್ತ ರಕ್ತದಾನ ಶಿಬಿರ, ಸಾಧಕರ ಸನ್ಮಾನ, ರಸಮಂಜರಿ ಹೀಗೆ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬೆಳಗಾವಿ ಮೂಲದ ಕಲಾವಿದರು ಡೋಲು ಕುಣಿತದಲ್ಲಿಯೇ ನೋಡುಗರ ಮನಸೂರೆಗೊಳ್ಳುವ ರೀತಿಯಲ್ಲಿ ವಿಸರ್ಜನೆಗೆ ಮುಂದಾಗಿದ್ದು ಪಟ್ಟಣದ ಜನತೆ ಮೆಚ್ಚುವಂತೆ ಮಾಡಿದ್ದು ಈ ವರ್ಷದ ವಿಶೇಷವಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಕಾರಿ ಬಸವಲಿಂಗೇಶ್ವರ ಸ್ವಾಮೀಜಿ, ವರ್ತಕ ಬಸವಲಿಂಗಪ್ಪ ಭೂತೆ, ಗಣ್ಯರಾದ ವೀರಣ್ಣ ಹುಬ್ಬಳ್ಳಿ, ಅಮರೇಶ, ಅಂದಯ್ಯ ಕಳ್ಳಿಮಠ ಸೇರಿ ಅನೇಕರು ಮಾತನಾಡಿ ಸಂಘಟನೆಯ ಕಾರ್ಯವೈಖರಿಯನ್ನು ಗುಣಗಾನ ಮಾಡಿದರು. ಭಗತ್ ಸಿಂಗ್ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.