ಗಂಗಾವತಿ: ನಗರದಲ್ಲಿ ನಾಲ್ಕು ಗಣೇಶ ಮೂರ್ತಿಗಳ ವಿಸರ್ಜನೆ ಸೆ.16ರಂದು ಅದ್ದೂರಿಯಾಗಿ ನಡೆಯಲಿದ್ದು, ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ನೂರಾರು ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಿದೆ.
21ನೇ ದಿನದ ಗಣೇಶ ಮೂರ್ತಿಯನ್ನು ಹಳೆ ಐಬಿ ಹತ್ತಿರದ ವಿಜಯವೃಂದ ಯುವಕರ ಬಳಗ, ವಾಲ್ಮೀಕಿ ವೃತ್ತದ ಅಖಿಲ ಕರ್ನಾಟಕ ವಾಲ್ಮೀಕಿ ಸಮಾಜ, ಗಾಂಧಿನಗರದ ಗಜಾನನ ಯುವಕ ಮಂಡಳಿ, ಲಿಂಗರಾಜ ಕ್ಯಾಂಪಿನ ವೀರ ಸಾವರ್ಕರ್ ಯುವ ಸೇನಾದವರು ವಿಸರ್ಜನೆ ಮಾಡುತ್ತಿದ್ದು, ಅದ್ದೂರಿ ಮೆರವಣಿಗೆಗೆ ಸಿದ್ದತೆ ನಡೆಸಿಕೊಂಡಿದ್ದಾರೆ.
ಯತ್ನಾಳ ಆಗಮನ ನಿಷೇಧಕ್ಕೆ ಮನವಿ: ನಗರದ ಹಳೆ ಐಬಿ ಹತ್ತಿರದ ವಿಜಯವೃಂದ ಯುವಕರ ಬಳಗದವರು ಆಯೋಜಿಸಿದ ಸಭೆಗೆ ಬರುತ್ತಿರುವ ಬಸವನಗೌಡ ಯತ್ನಾಳ ಪಾಟೀಲ ಅವರನ್ನು ನಗರಕ್ಕೆ ಬರದಂತೆ ನಿಷೇಧಿಸಲು ಮುಸ್ಲಿಂ ಸಮುದಾಯದ ಕೆಲ ಮುಖಂಡರು ಒತ್ತಾಯಿಸಿದ್ದಾರೆ.
ನಗರದ ಡಿವೈಎಸ್ಪಿ ಕಚೇರಿಯಲ್ಲಿ ಎಸ್‌ಪಿ ಎಲ್.ರಾಮ್ ಅರಸಿದ್ಧಿ ಅವರನ್ನ ಭೇಟಿ ಮಾಡಿದ ಮುಸ್ಲಿಂ ಸಮುದಾಯದ ನಿಯೋಗ, ‘ಯತ್ನಾಳ್ ವಿವಾದಿತ ಹೇಳಿಕೆಗಳು ನಗರದಲ್ಲಿ ಆಶಾಂತಿ ಸೃಷ್ಟಿಸುವ ಸಾಧ್ಯತೆಗಳಿವೆ. ಹೀಗಾಗಿ ಪ್ರವೇಶಕ್ಕೆ ನಿರ್ಬಂಧ ಹಾಕಿ’ ಎಂದು ಮನವಿ ಮಾಡಿದರು.
ಈ ವಿಚಾರಕ್ಕೆ ಎಸ್‌ಪಿ ಪ್ರತಿಕ್ರಿಯೆಸಿ, ‘ಯತ್ನಾಳ ಅವರನ್ನ ಆಹ್ವಾನಿಸುತ್ತಿರುವ ಸಂಘಟಕರಿಗೆ ಸೂಚನೆಗಳ ಜೊತೆಗೆ, ಷರತ್ತುಗಳನ್ನು ವಿಧಿಸಲಾಗಿದೆ. ಅವರು ವಿವಾದಿತ ಹೇಳಿಕೆ ನೀಡಿದರೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದ್ದು, ಗೊಂದಲಕ್ಕೆ ಅವಕಾಶ ನೀಡಬೇಡಿ’ ಎಂದರು.
ಮುಖಂಡರಾದ ಅಲ್ತಾಫ್ ಹುಸೇನ್ ಬಿಚ್ಚುಕತ್ತಿ, ಸಲೀಂಭಾಗವಾನ್, ಸಲೀಂ ಮನಿಯಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.