ADVERTISEMENT

ಯಲಬುರ್ಗಾ: ಶರಣಬಸವೇಶ್ವರ ರಥೋತ್ಸವ ಅದ್ದೂರಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:26 IST
Last Updated 15 ಫೆಬ್ರುವರಿ 2026, 4:26 IST
ಯಲಬುರ್ಗಾ ತಾಲ್ಲೂಕು ನಿಲೋಗಲ್ಲ ಗ್ರಾಮದ ಶರಣಬಸವೇಶ್ವರರ 49ನೇ ವರ್ಷದ ಜಾತ್ರೋತ್ಸವದ ಪ್ರಯುಕ್ತ ನಡೆದ ಅದ್ದೂರಿ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು
ಯಲಬುರ್ಗಾ ತಾಲ್ಲೂಕು ನಿಲೋಗಲ್ಲ ಗ್ರಾಮದ ಶರಣಬಸವೇಶ್ವರರ 49ನೇ ವರ್ಷದ ಜಾತ್ರೋತ್ಸವದ ಪ್ರಯುಕ್ತ ನಡೆದ ಅದ್ದೂರಿ ರಥೋತ್ಸವದಲ್ಲಿ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು   

ಯಲಬುರ್ಗಾ: ತಾಲ್ಲೂಕಿನ ನಿಲೋಗಲ್ಲ ಗ್ರಾಮದ ಶರಣಬಸವೇಶ್ವರರ 49ನೇ ವರ್ಷದ ಜಾತ್ರೋತ್ಸವ ಕಾರ್ಯಕ್ರಮ ಶನಿವಾರ ಅದ್ದೂರಿಯಾಗಿ ನೆರವೇರಿತು. ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಪೂಜೆ, ರುದ್ರಾಭಿಷೇಕಚ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ನೂತನ ರಥಕ್ಕೆ ಚಾಲನೆ ನೀಡಿದ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ರಥ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕಾರ ನೀಡಿ ಉದಾರ ಮನಸ್ಸು ತೋರಿದ್ದು ಅವರ ದೊಡ್ಡತನಕ್ಕೆ ಸಾಕ್ಷಿಯಾಗಿದೆ. ಗ್ರಾಮಸ್ಥರ ಸಹಾಯ ಸಹಕಾರದಿಂದ ಗ್ರಾಮದಲ್ಲಿ ಉತ್ಸವಗಳು ಸಭೆ ಸಮಾರಂಭಗಳು ಅದ್ದೂರಿಯಾಗಿ ಆಯೋಜನೆ ಸಾಧ್ಯವಾಗುತ್ತದೆ ಹಾಗೂ ಹೆಚ್ಚು ಮಹತ್ವ ಪಡೆದುಕೊಳ್ಳುತ್ತವೆ’ ಎಂದರು.

‘ಒಳ್ಳೆಯ ನಡೆ ನುಡಿ ಹಾಗೂ ಉತ್ತಮ ವ್ಯಕ್ತಿತ್ವದೊಂದಿಗೆ ಬದುಕುಕೊಟ್ಟಿಕೊಳ್ಳುವತ್ತ ಪ್ರಯತ್ನ ಪಟ್ಟರೆ ಖಂಡಿತ ಸಾಧ್ಯವಿದೆ. ಈ ನಡೆಯು ಮನೆಯ ಚಿಕ್ಕಮಕ್ಕಳಿಗೂ ಪಾಠವಾಗುತ್ತದೆ. ಮನೆಯಲ್ಲಿ ಉತ್ತಮ ಸಂಸ್ಕಾರ ಮತ್ತು ನಡಾವಳಿಗಳು ಸರಿಯಿದ್ದರೆ ಸಹಜವಾಗಿ ಮನೆಯವರು ಕೂಡಾ ಅದೇ ದಾರಿಯತ್ತ ಸಾಗುತ್ತಾರೆ. ಆದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಒಳ್ಳೆಯ ಸಂಸ್ಕಾರಗಳನ್ನು ಹೇಳಿಕೊಡುವ ಕೆಲಸ ಪ್ರತಿಯೊಬ್ಬರು ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ, ರಾಜೂರಿನ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವನಾಗಯ್ಯಶಾಸ್ತ್ರಿ ಹಿರೇಮಠ ಪಾಲ್ಗೊಂಡಿದ್ದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಐದು ಜೋಡಿಗಳು ಪಾಲ್ಗೊಂಡು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದರು.

ರಥೋತ್ಸವಕ್ಕೆ ಉಪ್ಪಲದಿನ್ನಿ ಗ್ರಾಮಸ್ಥರಿಂದ ತೇರು ಎಳೆಯುವ ಹಗ್ಗ, ಯಾಪಲದಿನ್ನಿ ಗ್ರಾಮಸ್ಥರಿಂದ ರಥೋತ್ಸವಕ್ಕೆ ಕಳಸ, ತರಲಕಟ್ಟಿ ಗ್ರಾಮಸ್ಥರಿಂದ ರಥಕ್ಕೆ ಹೂವಿನ ಹಾರವನ್ನು ಮೆರವಣಿಗೆಯ ಮೂಲಕ ತರಲಾಯಿತು.

ಸಕಲ ವಾದ್ಯ ಮೇಳದೊಂದಿಗೆ ನೆರವೇರಿದ ನೂತನ ರಥೋತ್ಸವಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದರು.

ಉಪ್ಪಲದಿನ್ನಿ, ಯಾಪಲದಿನ್ನಿ, ಹಿರೇವಂಕಲಕುಂಟಾ, ತರಲಕಟ್ಟಿ, ಚಿಕ್ಕವಂಕಲಕುಂಟಾ, ಗುನ್ನಾಳ, ಹುಣಶಿಹಾಳ, ಬೋಮ್ಮನಾಳ, ಮುಸಲಾಪೂರ, ಮರಕಟ್ಟ, ನರಸಾಪೂರ, ಮಾಟಲದಿನ್ನಿ, ಬೀರಲದಿನ್ನಿ, ಮಂಡಲಮರಿ, ಮಕ್ಕಳ್ಳಿ, ಮದ್ಲೂರು, ಗೆದಗೇರಿ ಸೇರಿ ಹಲವು ಗ್ರಾಮಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.