ADVERTISEMENT

11ರಿಂದ ಆದಿಚುಂಚನಗಿರಿ ಜಾತ್ರಾ ಮಹೋತ್ಸವ

ಮಹೋತ್ಸವಕ್ಕೆ ನಿರ್ಮಲಾನಂದನಾಥ ಸ್ವಾಮೀಜಿಯಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 6:56 IST
Last Updated 9 ಮಾರ್ಚ್ 2022, 6:56 IST
ಆದಿಚುಂಚನಗಿರಿ ಕ್ಷೇತ್ರ
ಆದಿಚುಂಚನಗಿರಿ ಕ್ಷೇತ್ರ   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಾರ್ಚ್‌ 11ರಿಂದ 19ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಮಾರ್ಚ್‌ 11ರಂದು ಬೆಳಿಗ್ಗೆ 8.30ಕ್ಕೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಧರ್ಮಧ್ವಜ ಸ್ಥಾಪನೆ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ, ನಾಂದಿ ಪೂಜೆ, 10.30ಕ್ಕೆ ಯುವ ಸಮ್ಮೇಳನ ನಡೆಯಲಿದೆ.

12ರಂದು ಬೆಳಿಗ್ಗೆ 10.30ಕ್ಕೆ ಚುಂಚಾದ್ರಿ ಮಹಿಳಾ ಸಮಾವೇಶ ಮತ್ತು ರಾತ್ರಿ 7ಕ್ಕೆ ಚಂದ್ರಮೌಳೇಶ್ವರ ಸ್ವಾಮಿ ಉತ್ಸವ, 13ರಂದು ಬೆಳಿಗ್ಗೆ 10.30ಕ್ಕೆ ಸಂಗೀತೋತ್ಸವ, ರಾತ್ರಿ 7ಕ್ಕೆ ಮಲ್ಲೇಶ್ವರ ಸ್ವಾಮಿ ಉತ್ಸವ, 14ರಂದು ಬೆಳಿಗ್ಗೆ 10.30ಕ್ಕೆ ಒಕ್ಕಲಿಗರ ಸಂಘಗಳ ಪದಾಧಿಕಾರಿಗಳ ಸಮ್ಮಿಲನ ಕಾರ್ಯಕ್ರಮ, ರಾತ್ರಿ 7.30ಕ್ಕೆ ಸಿದ್ದೇಶ್ವರಸ್ವಾಮಿ ಉತ್ಸವ ಜರುಗಲಿವೆ.

ADVERTISEMENT

15ರಂದು ಬೆಳಿಗ್ಗೆ 7.30ಕ್ಕೆ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣ ಕವಚಾಲಂಕಾರ ಪೂಜೆ ಮತ್ತು ಗಂಗಾಧರೇಶ್ವರ ಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆಗಳು ನಡೆಯಲಿವೆ. ಬೆಳಿಗ್ಗೆ 10.30ಕ್ಕೆ ಆದಿಚುಂಚನಗಿರಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯಲಿದೆ. 200ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ರಾತ್ರಿ 7ಕ್ಕೆ ಕಾಲಭೈರವೇಶ್ವರ ಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವಗಳು ನಡೆಯಲಿವೆ.

16ರಂದು ಬೆಳಿಗ್ಗೆ 9.30ಕ್ಕೆ ಸರಳ ಸಾಮೂಹಿಕ ವಿವಾಹವನ್ನು ಆಯೋಜಿಸ ಲಾಗಿದೆ. ಸುವರ್ಣ ಮಹೋತ್ಸವನ್ನು ಆಚರಿಸಿಕೊಂಡ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ. ರಾತ್ರಿ 7ಕ್ಕೆ ಸ್ವಾಮೀಜಿ ಅವರ ಜ್ವಾಲಪೀಠಾರೋಹಣ ಮತ್ತು ಸಿದ್ಧ ಸಿಂಹಾಸನ ಪೂಜೆ, 9ಕ್ಕೆ ಚಂದ್ರ ಮಂಡಲೋತ್ಸವ ನಡೆಯಲಿವೆ.

17ರಂದು ರಾತ್ರಿ 7.30ಕ್ಕೆ ಸರ್ವಧರ್ಮ ಸಮ್ಮೇಳನ, 8ಕ್ಕೆ ಕಾಲಭೈರವೇಶ್ವರ ಸ್ವಾಮಿ ತಿರುಗಣಿ ಉತ್ಸವ, 9ಕ್ಕೆ ಪುಷ್ಕರಣಿ ತೆಪ್ಪೋತ್ಸವ ಮತ್ತು 9.30ಕ್ಕೆ ನಾಟಕ ಪ್ರದರ್ಶನವಿದೆ.

18ರಂದು ಬೆಳಿಗ್ಗೆ 4 ಗಂಟೆಗೆ ಗಂಗಾಧರೇಶ್ವರ ಮಹಾ ರಥೋತ್ಸವ ಮತ್ತು ಸ್ವಾಮೀಜಿಯವರ ಅಡ್ಡ ಪಲ್ಲಕಿ ಉತ್ಸವ ನಡೆಯಲಿವೆ. ಸಂಜೆ 6 ಗಂಟೆ ನಂತರ ತಾಲ್ಲೂಕಿನ ನೂರಾರು ಗ್ರಾಮ ದೇವತೆಗಳ ಮೆರವಣಿಗೆ ಮೂಲಕ ಗಿರಿ ಪ್ರದಕ್ಷಿಣೆ ಮತ್ತು ಸಂಜೆ 7ಕ್ಕೆ ಸೋಮೇಶ್ವರ ಸ್ವಾಮಿ ಉತ್ಸವ ಜರುಗಲಿವೆ.

19ರಂದು ಬೆಳಿಗ್ಗೆ 9ಕ್ಕೆ ಧರ್ಮ ಧ್ವಜಾರೋಹಣ, 9.30ಕ್ಕೆ ಬಿಂದು ಸರೋವರದಲ್ಲಿ ಅವಭೃತ ಸ್ನಾನ, 10.30ಕ್ಕೆ ಸಭಾ ಕಾರ್ಯಕ್ರಮದ ಮೂಲಕ ಜಾತ್ರೆ ಮುಕ್ತಾಯವಾಗುತ್ತದೆ ಎಂದು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.