
ಪಾಂಡವಪುರ: ಮಂಡ್ಯ ಜಿಲ್ಲೆಯಲ್ಲಿ ಬೆಲ್ಲಕ್ಕೆ ಮಹತ್ವವಿದೆ. ಅದಕ್ಕೆ ಕಳಂಕ ತರುವಂತೆ ಪಾಂಡವಪುರ ತಾಲ್ಲೂಕಿನ ಕೆಲವು ಆಲೆಮನೆಗಳಲ್ಲಿ ಸಕ್ಕರೆ ಮಿಶ್ರಿತ ಬೆಲ್ಲ ತಯಾರಿಕೆಗೆ ಮುಂದಾಗಿರುವುದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ತಾಲ್ಲೂಕಿನ ಚಿಕ್ಕಾಡೆ, ಚಿಕ್ಕಬ್ಯಾಡರಹಳ್ಳಿ, ಡಿ.ಜಿ.ಕೊಪ್ಪಲು, ದೊಡ್ಡಬ್ಯಾಡರಹಳ್ಳಿ ಸೇರಿದಂತೆ ಸುತ್ತಮುತ್ತ ಕೆಲವು ಆಲೆಮನೆಗಳಲ್ಲಿ ಬೆಲ್ಲಕ್ಕೆ ಸಕ್ಕರೆ ಮಿಶ್ರಣ ಮಾಡುತ್ತಿರುವುದಲ್ಲದೆ, ಕಬ್ಬಿನ ಹಾಲು ಕುದಿಸಲು ವಿಷಕಾರಿ ತ್ಯಾಜ್ಯ ಬಳಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಬೆಲ್ಲ ತಯಾರಿಸಲು 12 ತಿಂಗಳು ಕಬ್ಬನ್ನು ಬಳಸಿದರೆ ಬೆಲ್ಲ ಚೆನ್ನಾಗಿರುತ್ತದೆ. ಇದು ಗುಣಮಟ್ಟದಿಂದ ಕೂಡಿರುತ್ತದೆ. ಆದರೆ ಒಂಬತ್ತು ಅಥವಾ ಹತ್ತು ತಿಂಗಳ ಎಳೆ ಕಬ್ಬನ್ನೇ ಕಡಿಮೆ ಬೆಲೆಗೆ ಖರೀದಿಸಿ ತರುತ್ತಿದ್ದಾರೆ. ಈ ಎಳೆ ಕಬ್ಬಿನಲ್ಲಿ ಹೆಚ್ಚು ಹಾಲು ಬರುವುದಿಲ್ಲ ಹಾಗೂ ಪಾಕವೂ ಗಟ್ಟಿ ಬರುವುದಿಲ್ಲ. ಇದರಿಂದ ಸಕ್ಕರೆ ಮಿಶ್ರಣ ಮಾಡಿ ಬೆಲ್ಲ ತಯಾರಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಒಂದು ಅಡುಗೆಗೆ (ಕೊಪ್ಪರಿಕೆ) 50 ಲೀಟರ್ ಕಬ್ಬಿನ ಜ್ಯೂಸ್ ಜೊತೆಗೆ 50 ಕೆ.ಜಿ.ಯಷ್ಟು ಗುಣಮಟ್ಟವಿಲ್ಲದ ಕಡಿಮೆ ದರದ ಸಕ್ಕರೆ ಬಳಸಿ ಬೆಲ್ಲ ಗಟ್ಟಿಗೊಳಿಸಿಕೊಂಡು ಬೆಲ್ಲದ ಇಳುವರಿ ಹೆಚ್ಚಿಸಿಕೊಳ್ಳುತ್ತಾರೆ. ಇಂತಹ ಕಲಬೆರಕೆ ಬೆಲ್ಲದಿಂದ ಹಣ ಮಾಡುವ ದುರಾಸೆಗೆ ಬಹುತೇಕ ಆಲೆಮನೆ ಮಾಲೀಕರು ಗಂಟುಬಿದ್ದಿರುವುದು ದುರಂತ ಎನ್ನುತ್ತಾರೆ ಸ್ಥಳೀಯರು.
‘ಕಲಬೆರಕೆಯಿಂದ ಬೆಲ್ಲದ ಪೌಷ್ಟಿಕಾಂಶದ ಗುಣಮಟ್ಟ ಕಡಿಮೆಯಾಗುತ್ತಿದೆ. ಇಂತಹ ಬೆಲ್ಲವನ್ನು ತಿನ್ನುವುದರಿಂದ ರೋಗಗಳು ಬರುತ್ತವೆ. ಜನರು ಇತ್ತೀಚಿಗೆ ಸಕ್ಕರೆ ಬದಲಿಗೆ ಬೆಲ್ಲವನ್ನು ಬಳಸುತ್ತಿದ್ದಾರೆ. ಆದರೆ ಆಲೆಮನೆ ಮಾಲೀಕರು ಸಕ್ಕರೆ ಬಳಸಿ ಬೆಲ್ಲ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಗುಣಮಟ್ಟದ ಶುದ್ಧ ಬೆಲ್ಲ ಯಾವುದು? ಸಕ್ಕರೆ ಬೆರೆಸಿ ತಯಾರು ಮಾಡಿದ ಬೆಲ್ಲ ಯಾವುದು? ಎಂಬುದು ಗ್ರಾಹಕರಿಗೆ ತಿಳಿಯುವುದಿಲ್ಲ’ ಎನ್ನುತ್ತಾರೆ ರೈತರಾದ ನಾಗೇಶ್ ರಾಗಿಮುದ್ದನಹಳ್ಳಿ, ಸಿಂಗ್ರೀಗೌಡ, ಕೆ.ಆರ್. ಶ್ರೀನಿವಾಸ್, ಎಸ್. ಬಾಲರಾಜು.
‘ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಔಷಧಗಳಿಂದ ಬೆಳೆದ ಆಹಾರಗಳನ್ನು ನಾವು ಈಗಾಗಲೇ ಬಳಸುತ್ತಿದ್ದೇವೆ. ಈಗ ಸಕ್ಕರೆ ಮಿಶ್ರಣ ಬೆಲ್ಲವನ್ನು ಉಪಯೋಗಿಸಿದರೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಆರೋಗ್ಯ ಇಲಾಖೆಯವರು ಕಣ್ಣುಮುಚ್ಚಿ ಕುಳಿತಿದ್ದಾರೆ’ ಎಂದು ಗ್ರಾಹಕರಾದ ಅಶ್ವತ್ಥ್ ನಾರಾಯಣ್, ಎಚ್.ಕೆ.ಕುಮಾರಸ್ವಾಮಿ, ಎಚ್.ಜಿ. ಗೋವಿಂದರಾಜು ಬೇಸರ ವ್ಯಕ್ತಪಡಿಸಿದರು.
‘ಪ್ಲಾಸ್ಟಿಕ್ ತ್ಯಾಜ್ಯ ಬಳಕೆ’
‘ತಾಲ್ಲೂಕಿನ ಬಹುತೇಕ ಆಲೆಮನೆಗಳಲ್ಲಿ ರಚ್ಚು, ಸೌದೆಯ ಬದಲು ಘನತ್ಯಾಜ್ಯ ಪ್ಲಾಸ್ಟಿಕ್, ಚಪ್ಪಲಿ, ಹಳೆಬಟ್ಟೆ, ವಾಹನಗಳ ಹಳೆ ಟೈರುಗಳನ್ನು ಬಳಸಿಕೊಂಡು ಕಬ್ಬಿನ ಹಾಲು ಕುದಿಸುವಿಕೆ ಮತ್ತು ಪಾಕ ತಯಾರು ಮಾಡಿ ಬೆಲ್ಲ ಮಾಡಲಾಗುತ್ತಿದೆ. ಘನ ತ್ಯಾಜ್ಯಗಳನ್ನು ಬಳಸುವುದರಿಂದ ‘ಕಾರ್ಬನ್ ಮೊನಾಕ್ಸೈಡ್’ ಎಂಬ ವಿಷಕಾರಿ ಅಂಶ ಜಾಸ್ತಿಯಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ ನಾವು ಸೇವಿಸುವ ಗಾಳಿಯೂ ವಿಷವಾಗುತ್ತಿದೆ’ ಎಂದು ರಾಜೀವ್, ಅಭಿನಯ್, ಸಂತೋಷ್ ಆತಂಕ ವ್ಯಕ್ತಪಡಿಸಿದರು.
ಬೆಲ್ಲ ತಯಾರಿಕೆಗೆ ಸಕ್ಕರೆ, ಹೈಡ್ರೋ ಸಲ್ಫೇಟ್ ಬಳಸುವಂತಿಲ್ಲ. ಕಲರ್ ಹಾಕುವಂತಿಲ್ಲ.ಈ ರೀತಿ ಕಂಡುಬಂದರೆ ಕ್ರಮ ವಹಿಸಲಾಗುವುದು.- ಸಿ.ಎನ್.ಸಂತೋಷ್, ಆಹಾರ ಸುರಕ್ಷತಾ ಅಧಿಕಾರಿ, ಆರೋಗ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.