ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ಹೆಚ್ಚಿನ ಭಕ್ತರು ಭೇಟಿ | ಶುದ್ದ ಕುಡಿಯುವ ನೀರಿನ ಬವಣೆ ಮೆಟ್ಟಿಲುಗಳ ದುರಸ್ತಿಗೆ ಆಗ್ರಹ
ಶ್ರೀರಂಗಪಟ್ಟಣ: ಜಿಲ್ಲೆ, ಹೊರ ಜಿಲ್ಲೆಗಳಲ್ಲೂ ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ಪ್ರಸಿದ್ದ ಶ್ರದ್ಧಾ ಕೇಂದ್ರ ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯದ ಗರ್ಭಗುಡಿ ಶಿಥಿಲವಾಗಿದ್ದು, ಮೂರು ಕಡೆ ಬಿರುಕುಗಳು ಕಾಣಿಸಿಕೊಂಡಿವೆ.
ದೇಗುಲದ ಗರ್ಭಗುಡಿಯ ಎಡ ಪಾರ್ಶ್ವ, ಬಲ ಭಾಗ ಮತ್ತು ಹಿಂಬದಿಯ ಗೋಡೆಗಳಲ್ಲಿ ಬಿರುಕುಗಳು ಮೂಡಿವೆ. ದೇವಾಲಯದ ಪ್ರಾಕಾರದ ಬಳಿ ಇಲಿ, ಹೆಗ್ಗಣಗಳು ಬಿಲ ತೋಡಿವೆ. ಹೆಗ್ಗಣಗಳು ತೋಡಿರುವ ಕಾರಣ ಮೂರ್ನಾಲ್ಕು ಕಡೆ ದೊಗರು ಬಿದ್ದಿದೆ. ಪ್ರಾಕಾರಕ್ಕೆ ಹೊಂದಿಕೊಂಡ ಗೋಡೆ ಕೂಡ ಶಿಥಿಲಾವಸ್ಥೆ ತಲುಪಿದೆ. ಗರ್ಭಗುಡಿಯ ಮುಂದೆ, ತೆಂಗಿನ ಕಾಯಿ ಒಡೆಯುವ ಸ್ಥಳದಲ್ಲಿರುವ ಕಟ್ಟೆಯಲ್ಲೂ ಬಿರುಕು ಮೂಡಿದೆ.
‘ಗರ್ಭ ಗುಡಿಯ ಚಾವಣಿಯೂ ಶಿಥಿಲವಾಗಿದ್ದು, ಮಳೆಗಾಲದಲ್ಲಿ ನೀರು ಜಿನುಗುತ್ತದೆ. ಇದರಿಂದ ಪೂಜಾ ಕೈಂಕರ್ಯಗಳಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳಿಗೆ ತಿಳಿಸಿದ್ದರೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ.
‘ದೇವಾಲಯ ಪಕ್ಕದಲ್ಲಿ ‘ಕಟ್ಟೆ’ ಒಡೆಯುವ ಕಲ್ಯಾಣಿಯ ಮೆಟ್ಟಿಲು, ಮೊಟ್ಟೆ ಒಡೆಯುವ ಸ್ಥಳ ಮತ್ತು ತಡೆ ಒಡೆಯುವ ಜಾಗಗಳಲ್ಲಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಕಲ್ಯಾಣಿಯ ಕೆಲವು ಮೆಟ್ಟಿಲುಗಳು ಜಾರುತ್ತಿವೆ. ಅವುಗಳನ್ನು ದುರಸ್ತಿಪಡಿಸಬೇಕು’ ಎಂದು ಸ್ಥಳೀಯ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
‘ಆರತಿ ಉಕ್ಕಡದ ಅಹಲ್ಯಾದೇವಿ ದೇವಾಲಯಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಮಂಗಳವಾರ, ಭಾನುವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಜನ ಜಾತ್ರೆಯೇ ಸೇರುತ್ತದೆ. ವರ್ಷಕ್ಕೆ ಒಂದು ಕೋಟಿ ರೂಪಾಯಿವರೆಗೆ ಆದಾಯ ಬರುತ್ತಿದೆ. ಆದರೆ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯದಂತಹ ಮೂಲ ಸೌಕರ್ಯದ ಕೊರತೆ ಇದೆ. ಸ್ನಾನದ ಮನೆಯೂ ಇಲ್ಲ. ಈ ದೇವಾಲಯವನ್ನು 2013ರಲ್ಲಿ ಧಾರ್ಮಿಕ ದತ್ತಿ ಇಲಾಖೆ ವಹಿಸಿಕೊಂಡ ಬಳಿಕ ಸಮಸ್ಯೆಗಳು ಹೆಚ್ಚಾಗಿವೆ’ ಎಂಬುದು ಪಕ್ಕದ ಕಡತನಾಳು ಗ್ರಾಮದ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್ ಅವರ ದೂರು.
‘ದೇವರ ಹೆಸರಿನಲ್ಲಿ ಕೊಡುವ ಚಿನ್ನ, ಬೆಳ್ಳಿ, ಸೀರೆ ಇತ್ಯಾದಿ ಕಾಣಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ತಡೆ, ಮೊಟ್ಟೆ ಮತ್ತು ಕಟ್ಟೆ ಒಡೆಯುವ ಹಣ ಸರ್ಕಾರಕ್ಕೆ ಬರುತ್ತಿಲ್ಲ. ಅದಕ್ಕೆಲ್ಲ ಕಡಿವಾಣ ಹಾಕಲಾಗುವುದು’ ಎಂದು ಸಿ.ಜಿ. ಕೃಷ್ಣ ತಿಳಿಸಿದರು.
ಅಹಲ್ಯಾದೇವಿ ದೇವಾಲಯದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಲಾಗುತ್ತಿದೆ. ಗರ್ಭಗುಡಿ ಮತ್ತು ಪ್ರಾಂಗಣದ ವಿನ್ಯಾಸ ಬದಲಾಗಲಿದೆ. ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆಸಿ.ಜಿ. ಕೃಷ್ಣ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ
ಶೌಚಾಲಯ ಅವ್ಯವಸ್ತೆಯ ಆಗರ
‘ದೇವಾಲಯದ ಎಡ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಒಂದು ವರ್ಷದ ಹಿಂದೆಯೇ ಕೆಟ್ಟಿದೆ. ಇನ್ನಾದರೂ ರಿಪೇರಿ ಮಾಡಿಸಿಲ್ಲ. ತೊಂಬೆ ನಲ್ಲಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಶುದ್ಧ ಕುಡಿಯುವ ನೀರಿಲ್ಲದೆ ಭಕ್ತರು ಬವಣೆ ಅನುಭವಿಸುತ್ತಿದ್ದಾರೆ. 20 ವರ್ಷಗಳ ಹಿಂದೆ ನಿರ್ಮಿಸಿರುವ ಶೌಚಾಲಯ ಅವ್ಯವಸ್ಥೆಯ ಆಗರವಾಗಿದೆ. ಸಮೀಪ ಹೋದರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದ್ದು ಯಾರೂ ಅತ್ತ ಸುಳಿಯುತ್ತಿಲ್ಲ. ಜುಲೈ 24ರಂದು ಭೀಮನ ಅಮಾವಾಸ್ಯೆ ದಿನ 20 ಸಾವಿರಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಲಿದ್ದು ಮೂಲ ಸೌಕರ್ಯ ಕಲ್ಪಿಸಬೇಕು’ ಎಂಬುದು ಪ್ರಜ್ಞಾವಂತರ ವೇದಿಕೆ ಅಧ್ಯಕ್ಷ ಸಿ.ಎಸ್. ವೆಂಕಟೇಶ್ ಅವರ ಆಗ್ರಹ.
ಹೆಜ್ಜೆ ಹೆಜ್ಜೆಗೂ ಹಣ ವಸೂಲಿ
‘ಮೊಟ್ಟೆ ಒಡೆಯುವ ಮತ್ತು ತಡೆ ಒಡೆಯುವ ಸೇವೆಯ ಹೆಸರಿನಲ್ಲಿ ಭಕ್ತರಿಂದ ಹೆಜ್ಜೆ ಹೆಜ್ಜೆಗೂ ಹಣವನ್ನೂ ವಸೂಲಿ ಮಾಡಲಾಗುತ್ತಿದೆ. ಒಂದೇ ಸೇವೆಗೆ ಐದಾರು ಕಡೆ ಏಕೆ ಹಣ ವಸೂಲಿ ಮಾಡುತ್ತೀರಿ ಎಂದು ಪ್ರಶ್ನಿಸುವ ಭಕ್ತರನ್ನು ಸ್ಥಳೀಯ ಗುಂಪು ಧಮಕಿ ಹಾಕಿ ಹಣ ಸುಲಿಗೆ ಮಾಡುತ್ತಿದ್ದಾರೆ. ಪುಣ್ಯ ಕ್ಷೇತ್ರದಲ್ಲಿ ಹಗಲು ದರೋಡೆ ರೀತಿ ನಡೆಯುತ್ತಿರುವ ಇಂತಹ ಕೃತ್ಯ ತಡೆಗಟ್ಟಲು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಭಕ್ತರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.