ADVERTISEMENT

ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಾಗಿಲ್ಲ: ಮುಸ್ಕಾನ್‌ ತಂದೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 13:17 IST
Last Updated 6 ಏಪ್ರಿಲ್ 2022, 13:17 IST
ಬೀಬಿ ಮುಸ್ಕಾನ್‌ ಖಾನ್‌ ಮತ್ತು ಮೊಹಮ್ಮದ್‌ ಹುಸೇನ್‌ ಖಾನ್‌
ಬೀಬಿ ಮುಸ್ಕಾನ್‌ ಖಾನ್‌ ಮತ್ತು ಮೊಹಮ್ಮದ್‌ ಹುಸೇನ್‌ ಖಾನ್‌    

ಮಂಡ್ಯ:‘ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಾಗಿಲ್ಲ, ಅವರ ದೇಶವನ್ನು ಅವರು ನೋಡಿಕೊಳ್ಳಲಿ. ನಮ್ಮ ದೇಶದಲ್ಲಿ ನಾವು ನೆಮ್ಮದಿಯಿಂದ ಇದ್ದೇವೆ, ಅಣ್ಣ–ತಮ್ಮಂದಿರ ರೀತಿಯಲ್ಲಿ ಪ್ರೀತಿ ಹಂಚಿ ಜೀವನ ಮಾಡುತ್ತಿದ್ದೇವೆ’ ಎಂದು ಬೀಬಿ ಮುಸ್ಕಾನ್‌ ಖಾನ್‌ ಅವರ ತಂದೆ ಮೊಹಮ್ಮದ್‌ ಹುಸೇನ್‌ ಖಾನ್‌ ಹೇಳಿದರು.

ನಗರದ ಪಿಇಎಸ್‌ ಕಾಲೇಜು ಆವರಣದಲ್ಲಿ ‘ಅಲ್ಲಾ ಹು ಅಕ್ಬರ್‌’ ಘೋಷಣೆ ಕೂಗಿದ ಬೀಬಿ ಮುಸ್ಕಾನ್‌ ಖಾನ್‌ ಅವರನ್ನು ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಅಲ್‌ ಝವಾಹಿರಿ ಹೊಗಳಿರುವುದು ವಿವಾದಕ್ಕೆ ಕಾರಣವಾಗಿದ್ದು ಈ ಕುರಿತು ಮೊಹಮ್ಮದ್ ಹುಸೇನ್‌ ಖಾನ್‌ ಬುಧವಾರ ಪ್ರತಿಕ್ರಿಯೆ ನೀಡಿದರು.

‘ಕೆಲವರು ನಮ್ಮನಮ್ಮಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಯಾರ ಹೊಗಳಿಕೆಯೂ ನಮಗೆ ಬೇಕಾಗಿಲ್ಲ, ಆತ ಯಾರು ಎನ್ನುವುದೇ ನಮಗೆ ಗೊತ್ತಿಲ್ಲ. ಅರಬ್ಬೀ ಭಾಷೆಯಲ್ಲಿ ಮಾತನಾಡಿರುವ ವ್ಯಕ್ತಿ ನಮ್ಮ ಮಗಳನ್ನು ಹೊಗಳಿದ್ದಾನೆ ಎಂಬುದು ಮಾಧ್ಯಮಗಳಿಂದ ಗೊತ್ತಾಗಿದೆ. ಆತನ ಹಿನ್ನೆಲೆಯೇ ನಮಗೆ ಗೊತ್ತಿಲ್ಲದ ಕಾರಣ ಅದರ ಬಗ್ಗೆ ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ’ ಎಂದರು.

ADVERTISEMENT

‘ಹಿಜಾಬ್‌ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇರುವ ಬಗ್ಗೆಯೂ ನಮಗೆ ಗೊತ್ತಿಲ್ಲ. ಬೇರೆ ದೇಶದವರು ನೀಡುವ ಹೇಳಿಕೆಗಳ ಕುರಿತಂತೆ ನಾವು ಏನು ಮಾತನಾಡುವುದು, ಅವರ ಮಾತುಗಳಿಗೆ ನಾವು ತಲೆ ಕೊಡಲು ಆಗುತ್ತಾ’ ಎಂದು ಪ್ರಶ್ನಿಸಿದರು.

‘ನಮ್ಮ ಮಗಳಿಗೆ ಜೀವ ಭಯವಿದ್ದು ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೇ ಮಾಡುವಂತೆ ಪಿಇಎಸ್‌ ಆಡಳಿತ ಮಂಡಳಿಗೆ ಮನವಿ ಮಾಡಿದ್ದೆ. ಆದರೆ ಅದಕ್ಕೆ ಅವರು ಅವಕಾಶ ಕೊಡಲಿಲ್ಲ. ಒಂದು ವರ್ಷ ವ್ಯರ್ಥವಾದರೂ ಪರವಾಗಿಲ್ಲ, ಬೇರೆ ಕಾಲೇಜಿಗೆ ದಾಖಲು ಮಾಡಲು ನಿರ್ಧರಿಸಿದ್ದೇವೆ. ಪಿಯು ಕಾಲೇಜುವರೆಗೆ ಮಾತ್ರ ಸಮವಸ್ತ್ರ ನಿಯಮವಿದೆ. ಕೆಲವು ಪದವಿ ಕಾಲೇಜುಗಳು ಹಿಜಾಬ್‌ ಧರಿಸಲು ಅವಕಾಶ ನೀಡಿದ್ದು ನಾವು ನಮ್ಮ ಮಗಳನ್ನು ಅಲ್ಲಿಗೇ ಸೇರಿಸುತ್ತೇವೆ’ ಎಂದರು.

ಮೆಕ್ಕಾ ಪ್ರವಾಸ: ‘ರಂಜಾನ್‌ ಮಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಉಮ್ರಾ ಆಚರಣೆಗಾಗಿ ಮೆಕ್ಕಾಗೆ ತೆರಳಲು ನಿರ್ಧರಿಸಿದ್ದೇವೆ. ನನಗೆ ಹಾಗೂ ಪತ್ನಿಗೆ ಮಾತ್ರ ಪಾಸ್‌ಪೋರ್ಟ್‌ ಇತ್ತು, ಮಕ್ಕಳ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದೆವು, ಈಗ ಮಕ್ಕಳಿಗೂ ಪಾಸ್‌ಪೋರ್ಟ್‌ ಬಂದಿದೆ. ಬೇರೆ ಉದ್ದೇಶಕ್ಕೆ ನಾವು ಮೆಕ್ಕಾಗೆ ತೆರಳುತ್ತಿಲ್ಲ. ಧಾರ್ಮಿಕ ಆಚರಣೆಗಾಗಿ 3–4 ದಿನ ಮೆಕ್ಕಾಗೆ ತೆರಳುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.