ADVERTISEMENT

ಮಂಡ್ಯದಲ್ಲಿ ಮತ್ತೊಂದು ನಿಗೂಢ ಕೊಲೆ: 5 ತುಂಡುಗಳಾಗಿ ಶವ ಪತ್ತೆ, ತನಿಖೆಗೆ ಸವಾಲು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 10:36 IST
Last Updated 23 ಫೆಬ್ರುವರಿ 2023, 10:36 IST
   

ಮಂಡ್ಯ: ತಾಲ್ಲೂಕಿನ ಕರೆಗೋಡು ಪೊಲೀಸ್‌ ಠಾಣೆ ವ್ಯಾಪ್ತಿಯ ನಾಲೆಯಲ್ಲಿ ಬುಧವಾರ ವ್ಯಕ್ತಿಯೊಬ್ಬರ ಮೃತದೇಹ 5 ತುಂಡುಗಳಲ್ಲಿ ಪತ್ತೆಯಾಗಿದ್ದು ಪ್ರಕರಣದ ತನಿಖೆ ಪೊಲೀಸರಿಗೆ ಸವಾಲೆನಿಸಿದೆ.

ಕಿಡಿಗೇಡಿಗಳು ವ್ಯಕ್ತಿಯನ್ನು ಕೊಲೆಮಾಡಿ, ತುಂಡುಗಳಾಗಿ ಕತ್ತರಿಸಿ ನಾಲೆಗೆ ಎಸದಿದ್ದಾರೆ ಎಂದು ಶಂಕಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಲ್ಲಿಯವರೆಗೂ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಜಿಲ್ಲಾ ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ಕಾಣೆಯಾದ ವ್ಯಕ್ತಿಗಳ ಮಾಹಿತಿ ಪಡೆಯಲಾಗುತ್ತಿದೆ.

ಮೃತ ವ್ಯಕ್ತಿಗೆ 30–35 ವರ್ಷ ವಯಸ್ಸಾಗಿದ್ದು ಕೈಗಳು, ಕಾಲು, ತಲೆ ಬುರುಡೆ, ಹೊಟ್ಟೆಯ ಭಾಗ ಪ್ರತ್ಯೇಕವಾಗಿ ಪತ್ತೆಯಾಗಿವೆ. ಬುಧವಾರ ಮಧ್ಯಾಹ್ನ ತಾಲ್ಲೂಕಿನ ಹೊಡಾಘಟ್ಟ ಗ್ರಾಮದ ಬಳಿಯ ಸಣ್ಣ ನಾಲೆಯಲ್ಲಿ ದೇಹದ ಭಾಗ ಪತ್ತೆಯಾಯಿತು. ನಂತರ ಪೊಲೀಸರು ನಾಲೆಯ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಶೋಧ ಕಾರ್ಯ ನಡೆಸಿದರು.

ADVERTISEMENT

ಡಣಾಯಕನಪುರ ಗ್ರಾಮದ ಬಳಿ ಕೈಗಳು ದೊರೆತವು, ಶಿವಾರ ಗ್ರಾಮದ ಬಳಿ ಕಾಲುಗಳು ಸಿಕ್ಕಿದವು. ಕೊಪ್ಪ ಗ್ರಾಮದ ಬಳಿ ತಲೆಬುರುಡೆ ಪತ್ತೆಯಾಯಿತು. ದೇಹದ ಭಾಗಗಳನ್ನು ಒಂದೆಡೆ ಸೇರಿಸಿ ಮರಣೋತ್ತರ ಪರೀಕ್ಷೆಗಾಗಿ ನಗರದ ಮಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಪೊಲೀಸರು ಮೃತ ವ್ಯಕ್ತಿ ಸಂಬಂಧಿಕರು ಕೆರಗೋಡು ಠಾಣೆ ಸಂಪರ್ಕಿಸುವಂತೆ ಕೋರಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌, ಡಿವೈಎಸ್‌ಪಿ ಓಂಪ್ರಕಾಶ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು ತನಿಖೆ ಸವಾಲಾಗಿದೆ. ಶೀಘ್ರ ಪ್ರಕರಣ ಭೇದಿಸುವ ವಿಶ್ವಾಸವಿದೆ’ ಎಂದು ಎಸ್ಪಿ ಯತೀಶ್‌ ಹೇಳಿದರು.

ಕಳೆದ ವರ್ಷ ಜೂನ್‌ ತಿಂಗಳಲ್ಲಿ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಇಂಥದ್ದೇ ಪ್ರಕರಣ ಪತ್ತೆಯಾಗಿತ್ತು. ಇಬ್ಬರು ಮಹಿಳೆಯರ ಶವಗಳು ಎರಡು ತುಂಡುಗಳಾಗಿ ಪ್ರತ್ಯೇಕವಾಗಿ ಪತ್ತೆಯಾಗಿದ್ದವು. ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಬಳಿ, ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ನಾಲೆಯಲ್ಲಿ ದೇಹದ ತುಂಡುಗಳು ಸಿಕ್ಕಿದ್ದವು.

ಇಬ್ಬರನ್ನೂ ಒಂದೇ ರೀತಿಯಾಗಿ ಹೊಟ್ಟೆಯಿಂದ ಕೆಳಭಾಗಕ್ಕೆ ಎರಡು ತುಂಡುಗಳಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಈವರೆಗೂ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.