ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಾಕಿಸಲು ಮಂಡ್ಯದ ಹಲವು ಜನರ ಮನವಿ!
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆ ‘ಬಾಡೂಟ’ವನ್ನೂ (ಮಾಂಸಾಹಾರ) ಹಾಕಿಸಬೇಕು ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.
ಸಮ್ಮೇಳನದಲ್ಲಿ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಿದವರಿಗೆ ‘ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ’ ಎಂಬ ಸೂಚನೆ ಕೊಡಲಾಗಿದೆ. ಇದರ ಬೆನ್ನಲ್ಲೇ, ವ್ಯಾಪಕ ವಿರೋಧ ವ್ಯಕ್ತವಾಗಿದೆ.
‘ಸಮ್ಮೇಳನ ಸಸ್ಯಾಹಾರಿಗಳಿಗೆ ಮಾತ್ರವೇ, ಬಾಡೂಟ ಯಾಕಿಲ್ಲ ಸ್ವಾಮಿ?’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದು ‘ಮಡಿ ಸಾಹಿತ್ಯ ಸಮ್ಮೇಳನ’ ಎಂದು ಕೆಲವರು ಕುಟುಕಿದ್ದಾರೆ. ‘ಸಸ್ಯಾಹಾರ–ಮಾಂಸಾಹಾರ ನಡುವಿನ ಮೇಲು–ಕೀಳು ತಾರತಮ್ಯ ಮನೋಭಾವವನ್ನು ವಿನಾಶಗೊಳಿಸಬೇಕು’ ಎಂದು ಕೆಲವರು ಪೋಸ್ಟರ್ ಹಿಡಿದು ಒತ್ತಾಯಿಸಿದ್ದಾರೆ.
‘ಬಾಡೇ ನಮಗೆ ಗಾಡು ಕಣಣ್ಣ’ ಎಂದು ಕೆಲವರು ಧ್ವನಿ ಎತ್ತಿರುವುದಕ್ಕೆ, ‘ಇದುವರೆಗೆ ನಡೆದ 86 ಸಾಹಿತ್ಯ ಸಮ್ಮೇಳನಗಳಲ್ಲಿ ಮಾಂಸಾಹಾರ ಹಾಕಿದ್ದಾರಾ? ಈಗ ಯಾಕೆ ಒತ್ತಾಯಿಸುತ್ತಿದ್ದೀರಿ? ಎಂದು ಕೆಲವು ನೆಟ್ಟಿಗರು ಬಾಡೂಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪರ–ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
‘ಸಮ್ಮೇಳನದಲ್ಲಿ ಮಾಂಸಾಹಾರ ನೀಡುವ ಮೂಲಕ ಮಂಡ್ಯ ಜನರ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.