ಮಂಡ್ಯ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ 533 ನೌಕರರಿಗೆ ಹಿರಿಯ ಪಶು ವೈದ್ಯಕೀಯ ಪರೀಕ್ಷಕರ ಹುದ್ದೆಗೆ ಮುಂಬಡ್ತಿ ನೀಡಿದ್ದರೂ, ಪ್ರಕ್ರಿಯೆಯು 7 ವರ್ಷಗಳಿಂದ ಕ್ರಮಬದ್ಧಗೊಳ್ಳದೆ ನನೆಗುದಿಗೆ ಬಿದ್ದಿದೆ.
2018ರಲ್ಲಿ ಮುಂಬಡ್ತಿ ನೀಡಿದ್ದು, 256 ನೌಕರರು ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ, ‘ಕೆಲವು ನ್ಯೂನತೆಗಳಿವೆ’ ಎಂದು ರಾಜ್ಯ ಸರ್ಕಾರ 2019ರಂದು ಮುಂಬಡ್ತಿ ಆದೇಶ ರದ್ದುಪಡಿಸಿತ್ತು.
ಬಾಧಿತ ನೌಕರರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಿಂದ (ಕೆ.ಎಸ್.ಎ.ಟಿ) ತಡೆಯಾಜ್ಞೆ ತಂದರು. ‘ನ್ಯೂನತೆಗಳನ್ನು ಎರಡು ತಿಂಗಳಲ್ಲಿ ಸರಿಪಡಿಸಿ, ಅಂತಿಮ ಜ್ಯೇಷ್ಠತಾ ಪಟ್ಟಿ ಹೊರಡಿಸಿ ಕ್ರಮಬದ್ಧಗೊಳಿಸಬೇಕು’ ಎಂದು ನ್ಯಾಯಮಂಡಳಿ ಆದೇಶಿಸಿತ್ತು.
ಅದರಂತೆ, 2021ರಲ್ಲಿ 177 ನೌಕರರು ಬಡ್ತಿ ಪಡೆದ ಹುದ್ದೆಗೆ ಸೇರ್ಪಡೆಗೊಂಡರು. ಉಳಿದ 100 ನೌಕರರಿಗೆ ಆ ಹುದ್ದೆ ಸಿಕ್ಕಿಲ್ಲ. ಅವರಲ್ಲಿ ಕೆಲವರು ನಿವೃತ್ತಿ ಹೊಂದಿದ್ದು, ಕೆಲವರು ಮೃತಪಟ್ಟಿದ್ದಾರೆ.
ಜ್ಯೇಷ್ಠತಾ ಪಟ್ಟಿಯಲ್ಲಿ ಹೆಸರಿಲ್ಲ!
‘ಕೆ.ಎಸ್.ಎ.ಟಿ ಆದೇಶದ ಮೇರೆಗೆ, 2024ರಲ್ಲಿ ಪಶು ವೈದ್ಯಕೀಯ ಪರೀಕ್ಷಕರ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಇಲಾಖೆ ಪ್ರಕಟಿಸಿತ್ತು. ಆದರೆ, ಮುಂಬಡ್ತಿಯನ್ನು ಕ್ರಮಬದ್ಧಗೊಳಿಸಲಿಲ್ಲ. ನಂತರ ಪ್ರಕಟಗೊಂಡ ಹಿರಿಯ ಪಶುವೈದ್ಯಕೀಯ ಪರೀಕ್ಷಕರ ಜ್ಯೇಷ್ಠತಾ ಪಟ್ಟಿಯಲ್ಲೂ ನೌಕರರನ್ನು ಸೇರಿಸಲಿಲ್ಲ. ಇದನ್ನು ಸರಿಪಡಿಸಲು ಹಲವು ಬಾರಿ ಕೋರಿದರೂ ಕ್ರಮ ಕೈಗೊಂಡಿಲ್ಲ’ ಎಂದು ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಜಿ. ಮಹಾಗಾಂವ ದೂರಿದ್ದಾರೆ.
‘533ರಲ್ಲಿ 433 ನೌಕರರು ಬಡ್ತಿ ಪಡೆದ ಹಿರಿಯ ಪಶುವೈದ್ಯಕೀಯ ಪರೀಕ್ಷಕರ ಹುದ್ದೆಯ ಸಂಬಳ ಮತ್ತು ಭತ್ಯೆ ಪಡೆಯುತ್ತಿದ್ದಾರೆ. ಆದರೆ, ಬಡ್ತಿ ಕ್ರಮಬದ್ಧಗೊಳ್ಳದೆ, ‘ಜಾನುವಾರು ಅಧಿಕಾರಿ’ ಹುದ್ದೆಗೆ ಬಡ್ತಿ ಪಡೆಯಲಾಗದೆ, ನಿವೃತ್ತಿಯಾಗಬೇಕಾಗಿದೆ. ಮುಂಬಡ್ತಿ ಚರ್ಚೆ ಹಂತದಲ್ಲೇ ಉಳಿದಿದ್ದು, ಆಯುಕ್ತರು ಸ್ಪಂದಿಸುತ್ತಿಲ್ಲ’ ಎಂದು ಸಂಘದ ಪದಾಧಿಕಾರಿಗಳು ಸಮಸ್ಯೆ ತೋಡಿಕೊಂಡರು.
‘ಗಣತಿ ಲಸಿಕೆ ಕೊಡೆವು’
‘ಮುಂಬಡ್ತಿಯನ್ನು ಕ್ರಮಬದ್ಧಗೊಳಿಸಿ ಮಾರ್ಚ್ 15ರೊಳಗೆ ಆದೇಶ ಹೊರಡಿಸದಿದ್ದರೆ ಜಾನುವಾರು ಗಣತಿ ಲಸಿಕಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುತ್ತೇವೆ. ಇಲಾಖೆಯ ಕಾರ್ಯಕ್ರಮಗಳಲ್ಲಿ ಕಪ್ಪು ಪಟ್ಟಿ ಧರಿಸಿ ಅಸಹಕಾರ ಚಳವಳಿ ಆರಂಭಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘದ ಅಧ್ಯಕ್ಷ ಎಚ್.ಪಾಂಡುರಂಗ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಅಸಹಕಾರ ಚಳವಳಿ ನಡೆಸುವ ಬಗ್ಗೆ ಲಿಖಿತವಾಗಿ ಯಾರೂ ಮಾಹಿತಿ ನೀಡಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು–ಶ್ರೀರೂಪಾ, ಆಯುಕ್ತರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.