
ಹಲಗೂರು: ‘ಜಿಲ್ಲೆಯ ಈಡಿಗ ಸಮುದಾಯದ ಎಲ್ಲಾ ಕುಟುಂಬಗಳು ಜಿಲ್ಲೆ ಮತ್ತು ರಾಜ್ಯ ಆರ್ಯ ಈಡಿಗರ ಸಂಘಗಳಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಮೋಹನ್ ದಾಸ್ ಕರೆ ನೀಡಿದರು.
ಹಲಗೂರಿನ ಎಚ್.ವಿ.ರಾಜಣ್ಣ ಅವರ ಮನೆ ಅವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಮಳವಳ್ಳಿ ತಾಲ್ಲೂಕು ಆರ್ಯ ಈಡಿಗರ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಾಜಿಗೌಡ ಮಾತನಾಡಿ, ‘ಜಿಲ್ಲಾ ಸಂಘದ ವತಿಯಿಂದ ಭವನ ನಿರ್ಮಿಸಿ ಪ್ರತಿ ವರ್ಷ ನಿರಂತರವಾಗಿ ಈಡಿಗ ಸಮುದಾಯದ 20 ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ₹90 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತಿದ್ದು, ಕಟ್ಟಡ ನಿರ್ಮಾಣಕ್ಕೆ ಅತೀ ಹೆಚ್ಚು ಧನ ಸಹಾಯ ನೀಡಿದ ಸಮುದಾಯದವರಿಗೆ ಧನ್ಯವಾದ ಸಲ್ಲಿಸುವೆ’ ಎಂದರು.
ಸಂಘದ ಗೌರವ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ‘ಸಮುದಾಯದ ಜನರು ಸಂಘಟನೆಯ ಮಹತ್ವ ಅರಿಯಬೇಕು. ಇತರೆ ಸಮುದಾಯದವರು ಅಭಿವೃದ್ಧಿ ಆಗುತ್ತಿದ್ದಾರೆ. ರಾಜ್ಯದಲ್ಲಿ ಅಲ್ಪ ಸಂಖ್ಯಾತರಾದ ನಾವು ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಲಭಿಸುವ ಅವಕಾಶಗಳನ್ನು ಪಡೆಯಲು ಸಂಘಟಿತರಾಗಬೇಕಿದೆ. ಮುಂದಿನ ಪೀಳಿಗೆಯ ಏಳಿಗೆಗಾಗಿ ಯೋಜನೆ ರೂಪಿಸಿ ಶ್ರಮಿಸಬೇಕಿದೆ’ ಎಂದರು.
ಖಜಾಂಚಿ ಕೆ.ಜಿ.ಜೀವನ್ ಕುಮಾರ್ ಮಾತನಾಡಿ, ‘ಸಮುದಾಯದ ಏಳಿಗೆಯ ಹಿತದೃಷ್ಟಿಯಿಂದ ಸಂಘವನ್ನು ಆರಂಭಿಸಿದ್ದು, ಎಲ್ಲರೂ ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಬಳಿ ಮನವಿ ಮಾಡಿದ್ದು, ನಾರಾಯಣಗುರು ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕರೆ ಜಾಗವನ್ನು ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.
ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಪಾಜಿಗೌಡ, ಡಾ.ಬಿ.ಟಿ.ಶ್ರೀಧರ್, ಸತ್ಯನಾಥ್, ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸಮುದಾಯದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ನಾರಾಯಣಗುರು ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ವೈ.ಅಶ್ವತ್ಥ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಎಚ್.ವಿ.ರಾಜು, ಕಾರ್ಯದರ್ಶಿ ಎಚ್.ಆರ್.ಪದ್ಮನಾಭ್, ಎಂ.ವಿ.ಸೋಮಶೇಖರ್, ಎಚ್.ಎನ್.ರಾಮಣ್ಣ, ಸೌಮ್ಯ ಶ್ರೀನಿವಾಸ್, ವಸಂತ್ ಕುಮಾರ್, ಸೋಮಶೇಖರ್, ಶ್ರೀನಿವಾಸ್, ದೇವರಾಜು, ಮುರುಳಿ, ರಮೇಶ್, ಸುರೇಶ್, ಕೆ.ರಾಘವೆಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.