ADVERTISEMENT

ಪಾಂಡವಪುರ: ಬೇಬಿಬೆಟ್ಟ ದನಗಳ ಜಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 5:31 IST
Last Updated 20 ಫೆಬ್ರುವರಿ 2023, 5:31 IST
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ದನಗಳ ಜಾತ್ರಾಮಹೋತ್ಸವದಲ್ಲಿ ವಿವಿಧ ಇಲಾಖೆಗಳ ವಸ್ತುಪ್ರದರ್ಶನಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ, ಶಿವಬಸವಸ್ವಾಮೀಜಿ ಇದ್ದರು
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ದನಗಳ ಜಾತ್ರಾಮಹೋತ್ಸವದಲ್ಲಿ ವಿವಿಧ ಇಲಾಖೆಗಳ ವಸ್ತುಪ್ರದರ್ಶನಗಳಿಗೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ, ಶಿವಬಸವಸ್ವಾಮೀಜಿ ಇದ್ದರು   

ಪಾಂಡವಪುರ: ತಾಲ್ಲೂಕಿನ ಪುರಾಣ ಪ್ರಸಿದ್ಧ ಬೇಬಿ ಬೆಟ್ಟದ ದನಗಳ ಜಾತ್ರಾಮಹೋತ್ಸವಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.

ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದರಿಂದ ದನಗಳ ಜಾತ್ರೆಯನ್ನು ನಡೆಸಲು ಸರ್ಕಾರ ನಿರಾಕರಿಸಿತ್ತು. ಆದರೆ, ಬೇಬಿ ಬೆಟ್ಟದ ಜಾತ್ರೆಯ ಐತಿಹಾಸಿಕ ಮಹತ್ವವನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟು ಜಾತ್ರೆಗೆ ಅನುಮತಿ ಪಡೆಯಲಾಗಿದೆ. ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದೆ ಎಂದರು.

ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ರಾಜ್ಯದ ಹಲವೆಡೆ ದನಗಳ ಜಾತ್ರೆ ನಡೆಯುವುದು ಸಾಮಾನ್ಯವಾ ಗಿದೆ. ಆದರೆ, ಈ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವುದು ವಿಶೇಷ. ಶಾಸಕ ಪುಟ್ಟರಾಜು ಅವರು ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಎಂದು ಪ್ರಶಂಸಿಸಿದರು.

ADVERTISEMENT

ಬೇಬಿಬೆಟ್ಟದ ರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ, ಕೋವಿಡ್‌ನಂಥ ಕಾಲದಲ್ಲೂ ದನಗಳ ಜಾತ್ರೆ ಸ್ಥಗಿತಗೊಂಡಿರಲಿಲ್ಲ. ಈ ಬಾರಿ ದನಗಳ ಜಾತ್ರೆಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಆತಂಕವಿತ್ತು. ಆದರೆ, ಮಲೆ ಮಹದೇಶ್ವರ ಮತ್ತು ಸಿದ್ದೇಶ್ವರರ ಕೃಪೆ ಮತ್ತು ಸ್ಥಳ ಮಹಿಮೆಯಿಂದ ಜಾತ್ರೆಗೆ ಸರ್ಕಾರ ಅನುಮತಿ ನೀಡಿರುವುದು ಸಂತಸ ತಂದಿದೆ ಎಂದರು.

ವಿವಿಧ ಇಲಾಖೆಗಳ ವಸ್ತುಪ್ರದರ್ಶ ನಕ್ಕೆ ಚಾಲನೆ ನೀಡಲಾಯಿತು. ಮಲೆ ಮಹದೇಶ್ವರಸ್ವಾಮಿ ಮತ್ತು ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ನಡೆದವು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಅಶೋಕ, ಉಪ ವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ಕೆ.ಸಿ.ಸೌಮ್ಯ, ತಾ.ಪಂ.ಇಒ ಎಸ್.ಎಂ.ಲೋಕೇಶ್ ಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚೆಲುವರಾಜು, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು ಹೊನಗಾನಹಳ್ಳಿ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರಯ್ಯ, ಚಿನಕುರಳಿ ಗ್ರಾ.ಪಂ.ಪುಟ್ಟಸ್ವಾಮಿ, ಜಾತ್ರಾ ಸಮಿತಿ ಅಧ್ಯಕ್ಷ ಶಿಂಡಭೋಗನಹಳ್ಳಿ ನಾಗರಾಜು, ಸದಸ್ಯರಾದ ಸಿ.ಎ.ಲೋಕೇಶ್, ಮೈಕ್ ಮಹಾದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.