ADVERTISEMENT

ಮಂಡ್ಯ| ಇಸ್ಲಾಮೀಕರಣ ತಡೆಗೆ ಹಿಂದೂಗಳು ಒಗ್ಗೂಡಲಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:47 IST
Last Updated 13 ಅಕ್ಟೋಬರ್ 2025, 2:47 IST
<div class="paragraphs"><p>ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಗಣೇಶ ವಿಸರ್ಜನೆಗೆಂದು ಆಗಮಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು</p></div>

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಗಣೇಶ ವಿಸರ್ಜನೆಗೆಂದು ಆಗಮಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು

   

ಮಂಡ್ಯ: ‘ಒಕ್ಕಲಿಗರು, ಲಿಂಗಾಯತರು, ದಲಿತರು, ಕುರುಬರು ಯಾವುದೇ ಜಾತಿ ಇರಲಿ, ಎಲ್ಲರೂ ಒಟ್ಟಾಗಿ ಹೋದರೆ ಇಸ್ಲಾಮೀಕರಣ ಮಾಡುವುದನ್ನು ತಡೆಯಬಹುದು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಕೆರಗೋಡು ಗ್ರಾಮದ ಗಣಪತಿ ಮೂರ್ತಿ ವಿಸರ್ಜನೆ ಕಾರ್ಯಕ್ರಮಕ್ಕೆ ಹೋಗುವ ಮಾರ್ಗಮಧ್ಯೆ ಹುಲಿವಾನದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ADVERTISEMENT

ಶೇ 4ರಷ್ಟು ಇರುವ ಮುಸ್ಲಿಂ ಸಮುದಾಯದವರು ಮದ್ದೂರಿನಲ್ಲಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ಎಸೆದು ಅಶಾಂತಿ ಉಂಟು ಮಾಡಿದ್ದಾರೆ. ಆದರೆ ಇವರು ಶೇ 40ರಷ್ಟು ಆದರೆ ನಮ್ಮ ಗತಿ ಏನು? ಜಮೀರ್‌ ಹೇಳಿರುವಂತೆ 2047ರ ವೇಳೆಗೆ ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ಅದರ ಭಾಗವಾಗಿ ಸಿದ್ದರಾಮಯ್ಯನವರ ಆಣತಿಯಂತೆ ಮುಸ್ಲಿಮರಿಗೆ ಪೊಲೀಸ್‌ ತರಬೇತಿ ನೀಡುತ್ತಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ಸುಪ್ರೀಂ ಆದೇಶ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ

ರಾಜ್ಯದ ಮೂಲೆ ಮೂಲೆ ಪ್ರವಾಸ ಮಾಡುತ್ತಿದ್ದೇನೆ. ಎಲ್ಲಾ‌ ಕಡೆ ಮಂಡ್ಯವನ್ನು ಉದಾಹರಣೆ ಕೊಡುತ್ತಿದ್ದೇನೆ. ಮಂಡ್ಯದಲ್ಲಿ ಹಿಂದೂಗಳು ಹೆಚ್ಚು ಜಾಗೃತಿ ಆಗಿದ್ದಾರೆ. ಬಿಜೆಪಿ ಸರ್ಕಾರ ಹಿಂದೂಗಳ ಮೇಲಿನ ಕೇಸ್ ವಾಪಸ್ ಪಡೆಯಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಮುಸ್ಲಿಂ ಗೂಂಡಾಗಳ ಮೇಲಿದ್ದ ಕೇಸ್ ವಾಪಾಸು ಪಡೆಯಲಾಯಿತು. ಕಾಂಗ್ರೆಸ್ ಸರ್ಕಾರ ಗಣೇಶೋತ್ಸವ ವೇಳೆ ಡಿಜೆ ಬ್ಯಾನ್ ಮಾಡಿದೆ. ದಿನಕ್ಕೆ ಐದು ಸಲ ಮಸೀದಿಯಲ್ಲಿ ಧ್ವನಿವರ್ಧಕ ಹಾಕುತ್ತಾರೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಧ್ವನಿವರ್ಧಕ ಬಳಸುತ್ತಿದ್ದಾರೆ, ಇದನ್ನು ಕೇಳಲ್ಲ ಎಂದು ಆರೋಪಿಸಿದರು.

ಯತ್ನಾಳಗೆ ಭವ್ಯ ಸ್ವಾಗತ

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಜರಂಗಸೇನೆ, ಮೂಡಲಬಾಗಿಲು ಹನುಮ ಮಾಲಾ ಸಮಿತಿ, ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು. 

ಯತ್ನಾಳ ಪರವಾದ ಘೋಷಣೆ ಮೊಳಗಿದವು. ಹಿಂದೂ ಪರವಾದ ಜೈಕಾರ ಮಾರ್ದನಿಸಿತು. ಮೊದಲಿಗೆ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಯತ್ನಾಳ ಅವರು, ನಂತರ ಬೈಕ್ ಮತ್ತು ಕಾರ್‌ ರ್‍ಯಾಲಿ ಮೂಲಕ ಕೆರಗೋಡು ಗಣೇಶ ಮೂರ್ತಿ ವಿಸರ್ಜನಾ ಸ್ಥಳಕ್ಕೆ ಹೊರಟರು.

ಕೆರಗೋಡಿನ ಪ್ರವೇಶ ದ್ವಾರದಲ್ಲಿಯೇ ಡಿಜೆ ಸೌಂಡ್‌ನೊಂದಿಗೆ ಪಟಾಕಿ ಸಿಡಿಸಿ ಸಂಭ್ರಮದ ಸ್ವಾಗತವನ್ನು ಯತ್ನಾಳರಿಗೆ ನೀಡಲಾಯಿತು. 

ಮಂಡ್ಯ ನಗರದ ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕೆರಗೋಡು ಗ್ರಾಮದ ಗಣೇಶ ಮೂರ್ತಿ ವಿಸರ್ಜನೆಗೆಂದು ಬಜರಂಗಸೇನೆ ಮೂಡಲಬಾಗಿಲು ಹನುಮ ಮಾಲಾ ಸಮಿತಿ ಹಿಂದೂ ರಕ್ಷಣಾ ವೇದಿಕೆ ಕಾರ್ಯಕರ್ತರು ಬೈಕ್‌ ಮತ್ತು ಕಾರಿನಲ್ಲಿ ರ‍್ಯಾಲಿ ಹೊರಟರು

‘ಬಿಜೆಪಿ– ಕಾಂಗ್ರೆಸ್‌ನಲ್ಲಿ ನವೆಂಬರ್‌ ಕ್ರಾಂತಿ’

‘ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದಲ್ಲಿ ‘ನವೆಂಬರ್‌ ಕ್ರಾಂತಿ’ ಆಗಬಹುದು ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎನ್ನುವ ಅಸಮಾಧಾನವು ಕಾಂಗ್ರೆಸ್‌ನಲ್ಲಿದ್ದರೆ ನಾಯಕತ್ವ ಬದಲಾವಣೆ ಕ್ರಾಂತಿ ಬಿಜೆಪಿಯಲ್ಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದರು. ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿ ‘ಉಚ್ಛಾಟನೆ ಮಾಡಿದ್ದು ಬಿಜೆಪಿ ಜನರಲ್ಲ. ಹಿಂದೂಗಳ ಮತಗಳ ವಿಭಜನೆ ನನ್ನ ಉದ್ದೇಶವಲ್ಲ. ಒಂದು ಕುಟುಂಬವನ್ನು ಕಡೆಗಣಿಸಿದರೆ ಬಿಜೆಪಿ ಮುಳುಗುತ್ತದೆ ಎಂಬ ಸುಳ್ಳನ್ನು ಬಿಂಬಿಸಲಾಯಿತು. ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ’ ಎಂದರು. 

‘ಕಲ್ಲು ಎಸೆದವರ ಮನೆಗೆ ಜೆಸಿಬಿ’

‘2028ಕ್ಕೆ ಹಿಂದೂ ಸರ್ಕಾರ ಬಂದರೆ ಮದ್ದೂರಿನಲ್ಲಿ ನಡೆದ ಘಟನೆ ಮುಂದೆ ನಡೆಯಲ್ಲ. ಗಣೇಶ ಏನು ತಪ್ಪು ಮಾಡಿದನೆಂದು ಮಸೀದಿಯಿಂದ ಕಲ್ಲು ಬಿಸಾಡಿದರು. ಯಾರು ಕಲ್ಲು ಎಸೆಯುತ್ತಾರೋ ಅವರ ಮನೆಗೆ ಜೆಸಿಬಿ ನುಗ್ಗಿಸೋದು ಸತ್ಯ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆಗೆ ಮುಂದಾಗಿದೆ. ಮುಸ್ಲಿಂ ಆಗಿ ಹುಟ್ಟಬೇಕೆಂದು ಸಿದ್ದರಾಮಯ್ಯ ಹೇಳುತ್ತಾರೆ. ಮುಸ್ಲಿಂ ಕಾರ್ಯಕ್ರಮದಲ್ಲಿ ಟೋಪಿ ಹಾಕುವವರು ಕುರುಬರ ರುಮಾಲು ಹಾಕಲು ಬಂದರೆ ಸಿಡಿಯುತ್ತಾರೆ. ಸನಾತನ ಧರ್ಮದ ರಕ್ಷಣೆ ಆಗಬೇಕು. ಹಳೇ ಮೈಸೂರು ಭಾಗದಲ್ಲಿ ಹಿಂದುತ್ವದ ಜಾಗೃತಿ ಆಗುತ್ತಿದೆ ಎಂದರು. 

‘ಸೂರ್ಯ ಚಂದ್ರ ಇರೋವರೆಗೋ ಆರ್‌ಎಸ್‌ಎಸ್‌’

‘ನೆಹರೂ ಇಂದಿರಾಗಾಂಧಿಗೆ ಆರ್‌ಎಸ್‌ಎಸ್‌ ನಿಷೇಧ ಮಾಡಲು ಆಗಲಿಲ್ಲ. ಮುಸ್ಲಿಮರನ್ನು ಖುಷಿ ಪಡಿಸಲು ಪ್ರಿಯಾಂಕ್‌ ಖರ್ಗೆ ಏನೇನೋ ಮಾತಾಡುತ್ತಾನೆ. ಇವನೊಬ್ಬ ಶತಮೂರ್ಖ. ಸೂರ್ಯ ಚಂದ್ರ ಇರೋವರೆಗೂ ಆರ್‌ಎಸ್‌ಎಸ್‌ ಇರುತ್ತದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದರು.  ‘ಇನ್ನೆರಡು ವರ್ಷ ಹಾರಾಡು ಪ್ರಿಯಾಂಕ್ ಖರ್ಗೆ ಆಮೇಲೆ ಹಿಂದೂ ಸರ್ಕಾರ‌ ಬರುತ್ತದೆ. ಕಾಂಗ್ರೆಸ್‌ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರಬಹುದು. ಆದರೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಅಷ್ಟು ಸುಲಭವಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.