ADVERTISEMENT

‘ರಕ್ತದಾನ ಮಾಡಿ ಲಸಿಕೆ ಪಡೆಯಿರಿ’ ಅಭಿಯಾನ!

ಕಾಡುತ್ತಿದೆ ರಕ್ತದ ಕೊರತೆ, ರೋಗಿಗಳಿಗೆ ಸಂಕಷ್ಟ, ರಕ್ತ ಕೊಟ್ಟು ಜೀವ ಉಳಿಸುವಂತೆ ಮನವಿ

ಎಂ.ಎನ್.ಯೋಗೇಶ್‌
Published 27 ಏಪ್ರಿಲ್ 2021, 12:44 IST
Last Updated 27 ಏಪ್ರಿಲ್ 2021, 12:44 IST
ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ರಕ್ತನಿಧಿ ಕೇಂದ್ರ
ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ರಕ್ತನಿಧಿ ಕೇಂದ್ರ   

ಮಂಡ್ಯ: ಮೇ 1ರಿಂದ 4ನೇ ಹಂತದ ಕೋವಿಡ್‌ ಲಸಿಕಾ ಅಭಿಯಾನ ಆರಂಭವಾಗಲಿದ್ದು 18–45 ವರ್ಷದೊಳಗಿನ ಯುವಜನರು ಲಸಿಕೆ ಪಡೆಯಲಿದ್ದಾರೆ. ‘ಲಸಿಕೆ ಪಡೆಯುವುದಕ್ಕೂ ಮೊದಲು ರಕ್ತದಾನಿ ಮಾಡಿ, ರೋಗಿಗಳ ಜೀವ ಉಳಿಸಿ’ ಎಂಬ ಅಭಿಯಾನ ಗಮನ ಸೆಳೆಯುತ್ತಿದೆ.

ಕೋವಿಡ್‌ ಲಸಿಕೆ ಮೊದಲ ಹಾಗೂ 2ನೇ ಡೋಸ್‌ ಪಡೆದ ನಂತರ ತಲಾ 28 ದಿನಗಳವರೆಗೆ ಆರೋಗ್ಯದ ದೃಷ್ಟಿಯಿಂದ ರಕ್ತದಾನ ಮಾಡಲು ಸಾಧ್ಯವಿಲ್ಲ. 2 ಡೋಸ್‌ ಸೇರಿ 56 ದಿನಗಳವರೆಗೆ ರಕ್ತದಾನದಿಂದ ದೂರ ಇರಬೇಕಾಗುತ್ತದೆ. 18–45 ವರ್ಷದೊಳಗಿನ ಬಹುತೇಕ ಮಂದಿ ರಕ್ತದಾನ ಮಾಡುತ್ತಾರೆ. ಅವರೆಲ್ಲರೂ ಲಸಿಕೆ ಹಾಕಿಸಿಕೊಂಡರೆ ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ತೆರಳುವುದಕ್ಕೂ ಮೊದಲು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಎಂಬ ಅಭಿಯಾನ ಆರಂಭಗೊಂಡಿದೆ.

ಮಿಮ್ಸ್‌ ಆಸ್ಪತ್ರೆ ಆವರಣದಲ್ಲಿರುವ ರಕ್ತನಿಧಿ ಕೇಂದ್ರದ ವೈದ್ಯರು, ಸಿಬ್ಬಂದಿ ಅಭಿಯಾನ ಕೈಗೊಂಡಿದ್ದು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿಯಮಿತವಾಗಿ ರಕ್ತದಾನ ಮಾಡುವ ಯುವಕರಿಗೆ, ರಕ್ತದಾನ ಶಿಬಿರ ಆಯೋಜನೆ ಮಾಡುವ ಸ್ವಯಂ ಸೇವಾ ಸಂಘಗಳ ಸದಸ್ಯರಿಗೆ ಅರಿವು ಮೂಡಿಸುತ್ತಿದ್ದಾರೆ.

ADVERTISEMENT

‘ಲಸಿಕೆ ಹಾಕಿಸಿಕೊಳ್ಳಲು ಬರುವ ಯುವಜನರು ಮೊದಲು ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಬೇಕು. ರಕ್ತದಾನ ಮಾಡಿದ ಕೆಲವೇ ನಿಮಿಷಗಳಲ್ಲಿ ಕೋವಿಡ್‌ ಲಸಿಕೆ ಪಡೆಯಬಹುದು. ಹೀಗಾಗಿ ಯುವಜನರು ರಕ್ತದ ಅವಶ್ಯಕತೆ ಇರುವವರ ಬಗ್ಗೆ ಯೋಚಿಸಿ ರಕ್ತದಾನ ಮಾಡಿ, ನಂತರ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಮಿಮ್ಸ್‌ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಮುರಳೀಧರ್‌ ಭಟ್‌ ಮನವಿ ಮಾಡಿದರು.

ರಕ್ತದ ಕೊರತೆ: ಕಳೆದೊಂದು ವರ್ಷದಿಂದ ಮಿಮ್ಸ್‌ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಆಸ್ಪತ್ರೆಯ ವಿವಿಧ ವಿಭಾಗದಿಂದ ರಕ್ತದ ಬೇಡಿಕೆ ಹೆಚ್ಚುತ್ತಿದ್ದು ಬೇಡಿಕೆಗೆ ತಕ್ಕಂತೆ ರಕ್ತ ಪೂರೈಸಲು ಸಾಧ್ಯವಾಗುತ್ತಿಲ್ಲ. ಮಿಮ್ಸ್‌ ಆಸ್ಪತ್ರೆಯಲ್ಲಿ ದಿನಕ್ಕೆ 35–40 ಮಕ್ಕಳು ಜನ್ಮತಾಳುತ್ತವೆ. ಬಹುತೇಕ ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಇದೆ.

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ವಿಪರೀತವಾಗಿದ್ದು ಗಾಯಗೊಂಡು ಆಸ್ಪತ್ರೆಗೆ ಬಂದ ಗಾಯಾಳುಗಳಿಗೆ ರಕ್ತದ ಅವಶ್ಯಕತೆ ಇದೆ. ರಕ್ತಹೀನತೆ, ತಲಸೀಮಿಯಾ ಮುಂತಾದ ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೂ ರಕ್ತದ ಅವಶ್ಯಕತೆ ಇದೆ. ಜೊತೆಗೆ ಬಿಳಿ ರಕ್ತದ ಕಣದ ಬೇಡಿಕೆಯೂ ಹೆಚ್ಚಾಗುತ್ತಿದೆ. ಜೊತೆಗೆ ಸದ್ಯ ಕೆಲ ಕೋವಿಡ್‌ ರೋಗಿಗಳಿಗೂ ರಕ್ತದ ಅವಶ್ಯಕತೆ ಉಂಟಾಗಿರುವ ಕಾರಣ ರಕ್ತದ ಕೊರತೆ ಹೆಚ್ಚುತ್ತಿದೆ.

ನಡೆಯದ ಶಿಬಿರಗಳು: ಜಿಲ್ಲೆಯಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ಹೆಚ್ಚು ರಕ್ತದಾನ ಶಿಬಿರಗಳು ನಡೆಯುತ್ತಿದ್ದವು. ಆದರೆ ಈಗ ಎಲ್ಲೆಲ್ಲೂ ಕೋವಿಡ್‌ ಪ್ರಕರಣ ಜಾಸ್ತಿಯಾಗುತ್ತಿದ್ದು ಶಿಬಿರಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್‌ ಘೋಷಣೆಯೂ ಆಗಿರುವ ಕಾರಣ ರಕ್ತದಾನ ಮಾಡುವ ಯುವಜನರು ಹೊರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

‘ಪ್ರತಿ ವರ್ಷ ಮೇ ತಿಂಗಳಲ್ಲಿ ಕುಟುಂಬ ಸಮೇತ ರಕ್ತದಾನ ಮಾಡುವ ಶಿಬಿರ ಆಯೋಜನೆ ಮಾಡುತ್ತಿದ್ದೆವು. 200 ಯೂನಿಟ್‌ನಷ್ಟು ರಕ್ತ ಸಂಗ್ರಹವಾಗುತ್ತಿತ್ತು. ಈಗ ಲಾಕ್‌ಡೌನ್‌ ಇರುವ ಕಾರಣ ಶಿಬಿರ ನಡೆಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಾದ್ಯಂತ ಸದ್ಯ ರಕ್ತದ ಕೊರತೆ ಉಂಟಾಗಿದ್ದು ರೋಗಿಗಳ ಸಂಬಂಧಿಕರು ನಮಗೆ ಕರೆ ಮಾಡುತ್ತಿದ್ದಾರೆ, ರಕ್ತಕ್ಕೆ ಮೊರೆ ಇಡುತ್ತಿದ್ದಾರೆ’ ಎಂದು ನೆಲದಿನ ರಕ್ತದಾನಿ ಬಳಗದ ಅಧ್ಯಕ್ಷ ಎಂ.ಸಿ.ಲಂಕೇಶ್‌ ಹೇಳಿದರು.

ಆಸ್ಪತ್ರೆಗೆ ತೆರಳಲು ಭಯ

ಮಿಮ್ಸ್‌ ರಕ್ತನಿಧಿಗೆ ತೆರಳಿ ನಿಯಮಿತವಾಗಿ ರಕ್ತದಾನ ಮಾಡುವ ಬಹಳ ಮಂದಿ ಯುವಕರು ಇದ್ದಾರೆ. ಆದರೆ ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮಿಮ್ಸ್‌ ಆಸ್ಪತ್ರೆ ಆವರಣಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

‘ರಕ್ತನಿಧಿ ಸಮೀಪದಲ್ಲೇ ಕೋವಿಡ್‌ ವಾರ್ಡ್‌ ಇದೆ. ಎಲ್ಲೆಲ್ಲೂ ಆತಂಕದ ವಾತಾವರಣವಿದ್ದು ಆಸ್ಪತ್ರೆಗೆ ತೆರಳಿ ರಕ್ತ ಕೊಡಲು ಭಯವಾಗುತ್ತಿದೆ’ ಎಂದು ಯುವಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.