ADVERTISEMENT

ಮಂಡ್ಯ: ಪ್ರತಿಭಟನೆ, ಬೈಕ್‌ ರ‍್ಯಾಲಿಗಷ್ಟೇ ಬಂದ್‌ ಸೀಮಿತ

ಎತ್ತಿನಗಾಡಿಯಲ್ಲಿ ಬಂದ ರೈತರು, ನಗಾರಿ ನುಡಿಸಿ ಗಮನ ಸೆಳೆದ ಮಹಿಳೆಯರು, ಸರ್ಕಾರಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 12:36 IST
Last Updated 27 ಸೆಪ್ಟೆಂಬರ್ 2021, 12:36 IST
ಮೆರವಣಿಗೆ ವೇಳೆ ಜನಶಕ್ತಿ ಸಂಘಟನೆ ಸದಸ್ಯೆಯರು ನಗಾರಿ ನುಡಿಸಿ ಗಮನ ಸೆಳೆದರು
ಮೆರವಣಿಗೆ ವೇಳೆ ಜನಶಕ್ತಿ ಸಂಘಟನೆ ಸದಸ್ಯೆಯರು ನಗಾರಿ ನುಡಿಸಿ ಗಮನ ಸೆಳೆದರು   

ಮಂಡ್ಯ: ರೈತರ ಬೇಡಿಕೆ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಂಘಟನೆಗಳ ಮುಖಂಡರು ಮೆರವಣಿಗೆ, ಬೈಕ್‌ ರ‍‍್ಯಾಲಿ ನಡೆಸುವುದಕ್ಕೆ ಮಾತ್ರ ಬಂದ್‌ ಸೀಮಿತವಾಯಿತು.

ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದ ಜೆ.ಸಿ ವೃತ್ತದಲ್ಲಿ ಕೆಲಕಾಲ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ರೈತರಿಗೆ ಮಾರಕವಾಗಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ನಂತರ ನಗರದ ವಿವಿಧೆಡೆ ಬೈಕ್ ರ‍್ಯಾಲಿ, ಮೆರವಣಿಗೆ ನಡೆಸುವ ಮೂಲಕ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಳಿಕಾಂಬ ದೇವಾಲಯ ಸೇತುವೆ ಬಳಿಯಿಂದ ಬೈಕ್‌ ರ್‍ಯಾಲಿ ಆರಂಭಿಸಿದ ಮುಖಂಡರು ಪೇಟೆಬೀದಿ, ಕಲ್ಲಹಳ್ಳಿ, ಎಪಿಎಂಸಿ ರಸ್ತೆ, ಬನ್ನೂರು ರಸ್ತೆ, ನೂರು ಅಡಿ ರಸ್ತೆ, ವಿವಿ ರಸ್ತೆ, ಆರ್‌.ಪಿ ರಸ್ತೆ, ವಿನೋಬಾ ರಸ್ತೆ, ಗುತ್ತಲು ರಸ್ತೆ ಮೂಲಕ ಸ್ವಿಲ್ವರ್‌ ಜ್ಯೂಬಿಲಿ ಉದ್ಯಾನ ತಲುಪಿದರು. ನಂತರ ನೂರಾರು ರೈತರು, ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಮೆರವಣಿಗೆ ನಡೆಸಿದರು.

ADVERTISEMENT

ಎತ್ತಿನ ಗಾಡಿ, ನಗಾರಿ ಸದ್ದು: ರೈತರು ಎತ್ತಿನಗಾಡಿಯಲ್ಲಿ ಬಂದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯುದ್ದಕ್ಕೂ ಹಸಿರು ಟವೆಲ್‌ಗಳು ರಾರಾಜಿಸಿದವು. ನೇಗಿಲು ಹೊತ್ತ ರೈತರು ಗಮನ ಸೆಳೆದರು. ಜನಶಕ್ತಿ ಸಂಘಟನೆಯ ಸದಸ್ಯೆಯರು ಮೆರವಣಿಗೆಯಲ್ಲಿ ನಗಾರಿ ನುಡಿಸಿದರು. ಜೆ.ಸಿ.ವೃತ್ತದಲ್ಲಿ ಕೆಲಕಾಲ ನಗಾರಿ ನುಡಿಸಿ ಗಮನ ಸೆಳೆದರು. ಅವರ ನಗಾರಿ ಸದ್ದಿಗೆ ಕೆಲ ರೈತರು ನೃತ್ಯ ಮಾಡಿದರು.

ಮುಚ್ಚದ ಅಂಗಡಿ ಮುಂಗಟ್ಟು: ಬಂದ್‌ ಅಂಗವಾಗಿ ವ್ಯಾಪಾರಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಖಂಡರು ಮೆರವಣಿಗೆಗೆ ತೆರಳುವ ಸಂದರ್ಭದಲ್ಲಿ ನೆಪಮಾತ್ರಕ್ಕಷ್ಟೇ ಅಂಗಡಿಗಳ ಬಾಗಿಲು ಮುಚ್ಚಿದರು. ನಂತರ ಎಂದಿನಂತೆ ವಹಿವಾಟು ನಡೆಸಿದರು. ವ್ಯಾಪಾರಿಗಳಿಗೆ ಬಂದ್‌ನಿಂದ ಯಾವುದೇ ರೀತಿಯಾದ ತೊಂದರೆ ಉಂಟಾಗಲಿಲ್ಲ. ಕೆಲ ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿದ್ದರು.

‘ಈಗಷ್ಟೇ ಕೋವಿಡ್‌ನಿಂದ ಹೊರಬಂದು ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದೆ. ಬಂದ್‌ನಿಂದ ಮತ್ತೆ ಅಂಗಡಿ ಬಾಗಿಲು ಮುಚ್ಚಬೇಕು ಎಂದರೆ ತೊಂದರೆಯಾಗುತ್ತದೆ’ ಎಂದು ವ್ಯಾಪಾರಿಯೊಬ್ಬರು ಹೇಳಿದರು. ಪ್ರತಿಭಟನಾಕಾರರು ಕೂಡ ಅಂಗಡಿ ಮುಚ್ಚಲು ವ್ಯಾಪಾರಿಗಳಿಗೆ ಒತ್ತಡ ಹೇರಲಿಲ್ಲ.

ರೈತರ ಆಕ್ರೋಶ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ, ಕರಾಳ ಕಾಯ್ದೆಗಳನ್ನ ತಕ್ಷಣವೇ ರದ್ದು ಮಾಡಬೇಕು. ರದ್ದು ಮಾಡುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಎಪಿಎಂಸಿ, ಭೂ ಸುಧಾರಣಾ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗಳನ್ನೂ ರದ್ದು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬೆಲೆ ಏರಿಕೆಯಿಂದಾಗಿ ಜನರ ಜೀವನ ಸಂಕಷ್ಟದಲ್ಲಿ ಸಿಲುಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಕುಸಿಯುತ್ತಿದ್ದರೂ ಪೆಟ್ರೋಲ್‌ ಬೆಲೆ ಹೆಚ್ಚಳವಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಬೇಕು. ಮೈಷುಗರ್‌ ಕಾರ್ಖಾನೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟಮಾದು, ಸಿಐಟಿಯು ನಾಯಕಿ ಕುಮಾರಿ, ಜನಶಕ್ತಿ ಮುಖಂಡ ಸಿದ್ದರಾಜು, ಮುಖಂಡರಾದ ಮಧುಚಂದನ್‌, ಸುಧೀರ್‌ ಕುಮಾರ್‌, ಎಲೆಚಾಕನಹಳ್ಳಿ ಸೋಮಶೇಖರ್‌ ಇದ್ದರು.

ಮಾತಿನ ಚಕಮಕಿ

ನಗರದ ಬನ್ನೂರು ರಸ್ತೆಯಲ್ಲಿ ಪ್ರತಿಭಟನಾಕಾರರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬೈಕ್‌ ಮೂಲಕ ಬಂದ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎರಡೂ ಗುಂ‍ಪುಗಳ ನಡುವೆ ವಾಗ್ವಾದ ಆರಂಭವಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿ ಪ್ರತಿಭಟನಾಕಾರರನ್ನು ಮುಂದಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.