
ಗಿಲ್ಲಿ ನಟ
ಮಂಡ್ಯ: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತ ಮಳವಳ್ಳಿಯ ಗಿಲ್ಲಿ ನಟ (ನಟರಾಜ್) ಅವರ ಸ್ವಾಗತಕ್ಕೆ ಮಳವಳ್ಳಿ ಪಟ್ಟಣ, ಹುಟ್ಟೂರು ದಡದಪುರ ಹಾಗೂ ಬಂಡೂರು ಸಜ್ಜುಗೊಂಡಿವೆ. ಬಿಗ್‌ಬಾಸ್ ಶೋನಲ್ಲಿ ಭಾಗಿಯಾಗುವ ಮುನ್ನ ಹಲವು ಖಾಸಗಿ ವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿ ನಟ ತಮ್ಮ ನಟನೆಯ ಮೂಲಕ ಜನರ ಗಮನ ಸೆಳೆದಿದ್ದರು.
ಗಿಲ್ಲಿ ನಟ
ಇದೀಗ ಬಿಗ್‌ಬಾಸ್-12ನೇ ಆವೃತ್ತಿಯ ವಿಜೇತರಾಗಿದ್ದು, ಕಳೆದ ಹಲವು ದಿನಗಳಿಂದಲೇ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಗಿಲ್ಲಿಯ ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಾಕಿ ಶುಭ ಕೋರಿದ್ದ ಅಭಿಮಾನಿಗಳು ಭಾನುವಾರ ರಾತ್ರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದರು. ಸೋಮವಾರ ಮಧ್ಯಾಹ್ನ ಮಳವಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದೆಲ್ಲೆಡೆ, ಬಂಡೂರಿನ ಪ್ರಮುಖ ರಸ್ತೆ, ಬಸವೇಶ್ವರ ಸರ್ಕಲ್, ದಡದಪುರ ಗ್ರಾಮಗಳಲ್ಲಿ ಗಿಲ್ಲಿ ನಟನಿಗೆ ಸ್ವಾಗತ ಕೋರುವ ದೊಡ್ಡ ದೊಡ್ಡ ಕಟೌಟ್‌ಗಳು ರಾರಾಜಿಸುತ್ತಿವೆ.
ರಸ್ತೆಯುದ್ದಕ್ಕೂ ಗಿಲ್ಲಿ ನಟನ ಕಟೌಟ್‌ಗಳು
ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಶಕ್ತಿದೇವತೆ ದಂಡಿ ಮಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಗಿಲ್ಲಿ ನಂತರ ಬಿಗ್‌ಬಾಸ್ ಟ್ರೋಫಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಅನಂತ್ ವೃತ್ತದ ಬಳಿ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಗೂ ಜೆಸಿಬಿಗಳ ಮೂಲಕ ಹೂವಿನ ಸುರಿಮಳೆ ನಡೆಯಲಿದೆ. ನಂತರ ಕೊಳ್ಳೇಗಾಲ ರಸ್ತೆ, ಮೈಸೂರು ರಸ್ತೆ, ಸುಲ್ತಾನ್ ರಸ್ತೆಯ ಮೂಲಕವೇ ಹುಟ್ಟೂರಿಗೆ ತೆರಳಲಿದ್ದಾರೆ.
ರಸ್ತೆಯುದ್ದಕ್ಕೂ ಗಿಲ್ಲಿ ನಟನ ಕಟೌಟ್‌ಗಳು
ಕೊಳ್ಳೇಗಾಲ ರಸ್ತೆಯ ಪಾರ್ಥಸಾರಥಿ ಹೋಟೆಲ್ ಬಳಿ ಗಿಲ್ಲಿ ಗೋಲ್ಡನ್ ಟೀ ಸ್ಟಾಲ್ ಉದ್ಘಾಟನೆ ಮಾಡಿ ಬಂಡೂರು ಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಗಿಲ್ಲಿ ಮಾತನಾಡಲಿದ್ದಾರೆ. ನಂತರ ದಡದಪುರದ ತಮ್ಮ ಮನೆಗೆ ತೆರಳಲಿದ್ದಾರೆ. ಮೆರವಣಿಗೆ ವೇಳೆ ಸಾವಿರಾರು ಮಂದಿ ಭಾಗಿಯಾಗುವ ಹಿನ್ನೆಲೆಯಲ್ಲಿ ಈಗಾಗಲೇ ಗ್ರಾಮಾಂತರ ಸಿಪಿಐ ಬಸವರಾಜು ಅವರು ಸ್ವಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಭದ್ರತೆಗಾಗಿ ಮೂರು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.