ADVERTISEMENT

ತವರೂರಿನ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ‘ಗಿಲ್ಲಿ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 16:01 IST
Last Updated 19 ಜನವರಿ 2026, 16:01 IST
   

ಮಳವಳ್ಳಿ/ ಭಾರತೀನಗರ: ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’-12ನೇ ಆವೃತ್ತಿಯ ವಿಜೇತರಾದ ಗಿಲ್ಲಿ ನಟ (ನಟರಾಜ್‌) ಅವರು ಸೋಮವಾರ ಹುಟ್ಟೂರು ದಡದಪುರಕ್ಕೆ ತೆರೆದ ವಾಹನದಲ್ಲಿ ಬರುವ ಮಾರ್ಗದುದ್ದಕ್ಕೂ ಅಭಿಮಾನಿಗಳು ಹೂವಿನ ಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು.

ಮದ್ದೂರು ಪಟ್ಟಣಕ್ಕೆ ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಬಂದ ಗಿಲ್ಲಿ ನಟನನ್ನು ನೋಡಿ ‘ಮಂಡ್ಯದ ಪ್ರತಿಭೆ, ನಮ್ಮೂರಿನ ಹುಡುಗ’ ಎಂದು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಬೃಹತ್‌ ಹೂವಿನ ಹಾರ ಹಾಕಿ ಮಂಡ್ಯ ಜಿಲ್ಲೆಗೆ ಸ್ವಾಗತಿಸಿದರು.

‘ಬಿಗ್ ಬಾಸ್’ ಶೋನಲ್ಲಿ ಭಾಗಿಯಾಗುವ ಮುನ್ನ ಹಲವು ಖಾಸಗಿ ವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿ ನಟ ಅವರು ತಮ್ಮ ಹಾಸ್ಯ ನಟನೆ, ಪಂಚ್‌ ಡೈಲಾಗ್‌ಗಳಿಂದ ಜನರ ಗಮನ ಸೆಳೆದು ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದರು.

ADVERTISEMENT

ಭಾರತೀನಗರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಿಂದ ಮೆಳ್ಳಹಳ್ಳಿಯವರೆಗೆ ಗಿಲ್ಲಿ ನಟನನ್ನು ನೋಡಲು ದಾರಿಯುದ್ದಕ್ಕೂ ಸಾವಿರಾರು ಮಂದಿ ನೆರೆದಿದ್ದರು. ಅಭಿಮಾನಿಗಳತ್ತ ಕೈ ಬೀಸಿ, ಕೈ ಮುಗಿದು ಅಭಿನಂದನೆ ತಿಳಿಸುತ್ತಿದ್ದ ಗಿಲ್ಲಿ ‘ಬಿಗ್ ಬಾಸ್’ ಟ್ರೋಫಿಯೊಂದಿಗೆ ಕಿರುನಗೆ ಬೀರಿದರು.

ಮಳವಳ್ಳಿಗೆ ಅದ್ದೂರಿ ಸ್ವಾಗತ

ಮಳವಳ್ಳಿ ಪಟ್ಟಣಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಜನರ ನಡುವೆ ಶಕ್ತಿ ದೇವತೆ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ತೆರಳಿದ ಗಿಲ್ಲಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ತೆರೆದ ವಾಹನದಲ್ಲಿ ‘ಬಿಗ್ ಬಾಸ್’ ಟ್ರೋಫಿಯೊಂದಿಗೆ ಪಟ್ಟಣಕ್ಕೆ ಬಂದ ಗಿಲ್ಲಿ ಅವರನ್ನು ನೋಡಲು ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಮುಗಿಬಿದ್ದರು. ನಿರೀಕ್ಷೆಗೂ ಮೀರಿ ಸೇರಿದ್ದ ಜನಸ್ತೋಮ ಕಂಡ ಗಿಲ್ಲಿ ನಟ ಒಂದು ಕ್ಷಣ ಬೆರಗಾದರು.

ಅನಂತ್ ರಾಂ ವೃತ್ತದ ಬಳಿ ಟ್ರೋಫಿಗೆ ಮುತ್ತಿಕ್ಕಿ ಜನರಿಗೆ ನಮಸ್ಕರಿಸಿ ಕೆಲವು ಡೈಲಾಗ್‌ ಹೇಳುವ ಮೂಲಕ ಜನರನ್ನು ರಂಜಿಸಿದರು. ಅನಿತಾ ಕಾನ್ವೆಂಟ್‌ ರಸ್ತೆ, ಸುಲ್ತಾನ್ ರಸ್ತೆ ಮೂಲಕ ಬಂಡೂರು- ದಡದಪುರಕ್ಕೆ ಆಗಮಿಸಿದ ಅವರನ್ನು ಅಕ್ಕಪಕ್ಕದ ಹತ್ತಾರು ಗ್ರಾಮಗಳ ಜನರು ತಮಟೆ, ನಗಾರಿಗಳೊಂದಿಗೆ ಹಾಗೂ ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರು.

ಹುಟ್ಟೂರು ದಡದಪುರ ಗ್ರಾಮದಲ್ಲಿ ಗಿಲ್ಲಿ ಮನೆ ಬೀದಿಯಲ್ಲಿ ಮಹಿಳೆಯರು ರಂಗೋಲಿಗಳನ್ನು ಬಿಡಿಸಿ ಸ್ವಾಗತ ಕೋರಿದರು. ಮನೆಯ ಸುತ್ತ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಟ್ಯಾಟೂ ಹಾಕಿಸಿಕೊಂಡ ಚೀರನಹಳ್ಳಿಯ ಕುಮಾರ್‌ ಅವರನ್ನು ನೋಡಿ ಗಿಲ್ಲಿ ಅವರ ತಾಯಿ ಸಂತಸ ವ್ಯಕ್ತಪಡಿಸಿದರು.

ಅಭಿಮಾನಿಗಳಿಂದ ಉಚಿತ ದೋಸೆ, ಬಿರಿಯಾನಿ

ಮದ್ದೂರು ತಾಲ್ಲೂಕಿನ ದೊಡ್ಡಅರಸಿನಕೆರೆ ಗೇಟ್‌ ಸಮೀಪದ ಹೋಟೆಲ್‌ನಲ್ಲಿ ಮಾಲೀಕ ಗವಿಗೌಡ ಅವರು ಗಿಲ್ಲಿಯ ಅಭಿಮಾನದ ದ್ಯೋತಕವಾಗಿ ಅಭಿಮಾನಿಗಳಿಗೆ ಉಚಿತವಾಗಿ ದೋಸೆ ಮತ್ತು ಉಪಾಹಾರ ವಿತರಿಸಿದರು.

ಮಳವಳ್ಳಿಯ ಆರ್‌.ಆರ್‌. ಫ್ಯಾಮಿಲಿ ಡಾಬಾದ ರಾಜು ಅವರು ಉಚಿತವಾಗಿ ಬಿರಿಯಾನಿ ಮತ್ತು ಕಾಲ್‌ ಸೂಪು ನೀಡಿದರು. ತಳಗವಾದಿ ಗ್ರಾಮದ ಜಗ್ಗಿ ಅವರು ಉಚಿತವಾಗಿ ಜನರಿಗೆ ಗೋಬಿ ವಿತರಿಸಿದರು.

ಪೊಲೀಸರ ಹರಸಾಹಸ

ಗಿಲ್ಲಿ ನಟನನ್ನು ನೋಡಲು ಮೈಸೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ, ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಪೊಲೀಸರ ನಿರೀಕ್ಷೆಗೂ ಮೀರಿದ ಜನರ ದಂಡು ಜಮಾಯಿಸಿತ್ತು. ಮಳವಳ್ಳಿಯ ಗಡಿಭಾಗದಿಂದ ಬಂಡೂರಿನವರೆಗೂ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟರು.

ಹೆಚ್ಚುವರಿ ಎಸ್ಪಿ ತಿಮ್ಮಯ್ಯ ಮತ್ತು ಡಿವೈಎಸ್ಪಿ ಯಶವಂತಕುಮಾರ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಒದಗಿಸಿ, ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡದ್ದು ಜನ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.