ADVERTISEMENT

ಖಾಸಗಿ ಫೈನಾನ್ಸ್‌ಗಳಿಂದ ವಂಚನೆ; ಸಂತ್ರಸ್ತೆಯರಿಂದ 7.80 ಲಕ್ಷ ದೂರು

ಖಾಸಗಿ ಫೈನಾನ್ಸ್‌ಗಳಿಂದ ವಂಚನೆ; ಪರಿಹಾರದ ನಿರೀಕ್ಷೆಯಲ್ಲಿ ಗ್ರಾಮೀಣ ಮಹಿಳೆಯರು

ಸಿದ್ದು ಆರ್.ಜಿ.ಹಳ್ಳಿ
Published 22 ಜನವರಿ 2025, 19:38 IST
Last Updated 22 ಜನವರಿ 2025, 19:38 IST
ಮಂಡ್ಯ ಜಿಲ್ಲಾಡಳಿತ ವತಿಯಿಂದ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಕ್ಕೆ ಅರ್ಜಿ ಸಲ್ಲಿಸಿದ ಸಂತ್ರಸ್ತೆಯರು (ಸಂಗ್ರಹ ಚಿತ್ರ)
ಮಂಡ್ಯ ಜಿಲ್ಲಾಡಳಿತ ವತಿಯಿಂದ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಕ್ಕೆ ಅರ್ಜಿ ಸಲ್ಲಿಸಿದ ಸಂತ್ರಸ್ತೆಯರು (ಸಂಗ್ರಹ ಚಿತ್ರ)   

ಮಂಡ್ಯ: ಒಂದೆಡೆ, ಬಡ ಮತ್ತು ಮಧ್ಯಮ ವರ್ಗದವರಿಗೆ ಖಾಸಗಿ ಫೈನಾನ್ಸ್‌ಗಳ ಕಿರುಕುಳ ಹೆಚ್ಚಾಗುತ್ತಿದೆ. ಮತ್ತೊಂದೆಡೆ, ಖಾಸಗಿ ಹಣಕಾಸು ಸಂಸ್ಥೆಗಳನ್ನು ನಂಬಿ ಹಣ ಹೂಡಿಕೆ ಮಾಡಿ, ವಂಚನೆಗೊಳಗಾದ ಲಕ್ಷಾಂತರ ಗ್ರಾಮೀಣ ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. 

ರಾಜ್ಯದ ಖಾಸಗಿ ಹಣಕಾಸು ಸಂಸ್ಥೆ ಮತ್ತು ಕಂಪನಿಗಳಿಗೆ ‘ಅನಿಯಂತ್ರಿತ ಠೇವಣಿ’ (ಅನ್‌ರೆಗ್ಯುಲೇಟೆಡ್‌ ಡೆಪಾಸಿಟ್‌) ಯೋಜನೆಗಳ ಅಡಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತೆಯರಿಂದ 7.80 ಲಕ್ಷಕ್ಕೂ ಹೆಚ್ಚು ದೂರು ಅರ್ಜಿಗಳು ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಿಗೆ ಸಲ್ಲಿಕೆಯಾಗಿವೆ. 

ಬೆಳಗಾವಿ- 2,71,466, ಬಾಗಲಕೋಟೆ- 89,037, ವಿಜಯಪುರ- 75,000 ಹಾಗೂ ಮಂಡ್ಯ ಜಿಲ್ಲೆಯಲ್ಲಿ 42,500 ದೂರು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಜಿಲ್ಲೆಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ದೂರುಗಳಿವೆ.

ADVERTISEMENT

ಕಳೆದ ವರ್ಷ ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಗಳಿಗೆ ಮಹಿಳೆಯರಿಂದ ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ. ‘ಸರ್ಕಾರ ಪರಿಹಾರ ಕೊಡಿಸುತ್ತದೆ’ ಎಂಬ ನಿರೀಕ್ಷೆಯಲ್ಲಿ ಸಂತ್ರಸ್ತೆಯರು ಕಾಯುತ್ತಿದ್ದಾರೆ. 

ಸಕ್ಷಮ ಪ್ರಾಧಿಕಾರ ರಚನೆ:

ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 (ಕೆ.ಪಿ.ಐ.ಡಿ ಅಧಿನಿಯಮ) ಮತ್ತು 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (ಬಡ್ಸ್‌ ಆ್ಯಕ್ಟ್‌) 2019ರ ಅಡಿಯಲ್ಲಿ 127 ಕಂಪನಿಗಳನ್ನು ವಿಚಾರಣೆ ನಡೆಸಲು ಪ್ರತ್ಯೇಕ ‘ಸಕ್ಷಮ ಪ್ರಾಧಿಕಾರ’ವನ್ನು ಸರ್ಕಾರ ನೇಮಿಸಿದೆ. 

‘ಕೆಲವು ಸಂಸ್ಥೆಗಳಿಗೆ ಸಂಬಂಧಿಸಿ ಪ್ರಾಧಿಕಾರ ನೇಮಕಾತಿಗೆ ಪ್ರಸ್ತಾವ ಸ್ವೀಕೃತವಾಗಿಲ್ಲ. ಅಂಥ ಸಂಸ್ಥೆಗಳ ವಿರುದ್ಧ ಸಲ್ಲಿಕೆಯಾಗಿರುವ ದೂರು ಅರ್ಜಿಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಳುಹಿಸಿ, ತನಿಖೆ ನಡೆಸಿ ವರದಿ ನೀಡಿ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. 

‘ಅಧಿಕ ಬಡ್ಡಿ ಆಸೆ ತೋರಿಸಿ, ಮಹಿಳೆಯರಿಂದ ಹಣ ಕಟ್ಟಿಸಿಕೊಳ್ಳುವ ಖಾಸಗಿ ಫೈನಾನ್ಸ್‌ ಏಜೆಂಟರು ರಾತ್ರೋರಾತ್ರಿ ಪರಾರಿಯಾಗುತ್ತಿದ್ದಾರೆ. ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೈನಾನ್ಸ್‌ಗಳಿಗೆ ಸರ್ಕಾರ ಮೂಗುದಾರ ಹಾಕಬೇಕು’ ಎಂದು ಸಿಐಟಿಯು ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಆಗ್ರಹಿಸಿದ್ದಾರೆ. 

ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ದೂರು ಅರ್ಜಿಗಳನ್ನು ವಿಂಗಡಿಸಿ ಆಯಾ ಸಕ್ಷಮ ಪ್ರಾಧಿಕಾರಗಳಿಗೆ ಕಳುಹಿಸಿಕೊಡುವ ಪ್ರಕ್ರಿಯೆ ಜಾರಿಯಲ್ಲಿದೆ
ಕುಮಾರ, ಜಿಲ್ಲಾಧಿಕಾರಿ ಮಂಡ್ಯ
ತಪ್ಪಿತಸ್ಥ ಕಂಪನಿಗಳ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಸಂತ್ರಸ್ತೆಯರಿಗೆ ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು
ದೇವಿ , ರಾಜ್ಯ ಪ್ರಧಾನ ಕಾರ್ಯದರ್ಶಿ ಜನವಾದಿ ಮಹಿಳಾ ಸಂಘ

ಅತಿ ಹೆಚ್ಚು ದೂರು ಅರ್ಜಿ ಸಲ್ಲಿಕೆಯಾದ ಜಿಲ್ಲೆಗಳ ವಿವರ 

1.ಬೆಳಗಾವಿ;2,71,466

2.ಬಾಗಲಕೋಟೆ;89,037

3.ವಿಜಯಪುರ;75,000

4.ಮಂಡ್ಯ;42,500

5.ಗದಗ;41,116

6.ಧಾರವಾಡ;36,489

7.ರಾಮನಗರ;33,326

8.ಶಿವಮೊಗ್ಗ;25,525

9.ಹಾಸನ;24,556

10.ಚಿಕ್ಕಬಳ್ಳಾಪುರ;22,054

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.