ADVERTISEMENT

ಮಂಡ್ಯ: ರಾಜ್ಯಮಟ್ಟದ ಚಕ್ಕಡಿ ಓಟ ಸ್ಪರ್ಧೆಗೆ ಚಾಲನೆ

ಗ್ರಾಮೀಣ ಜನರ ಹಿತ ಕಾಯುವ ಜೋಡೆತ್ತು: ಪಲ್ಲವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:54 IST
Last Updated 22 ಡಿಸೆಂಬರ್ 2025, 2:54 IST
ಹುಲಿ ಗೆಳೆಯರ ಬಳಗದ ವತಿಯಿಂದ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ರಾಜ್ಯ ಮಟ್ಟದ ಪ್ರಥಮ ವರ್ಷದ ಚಕ್ಕಡಿ ಜೋಡಿ ಕರುಗಳ ಓಟದ ಸ್ಪರ್ಧೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷೆ ಪಲ್ಲವಿ ಚಾಲನೆ ನೀಡಿದರು. ಗ್ರಾಮದ ಮುಖಂಡರು ಭಾಗವಹಿಸಿದ್ದರು 
ಹುಲಿ ಗೆಳೆಯರ ಬಳಗದ ವತಿಯಿಂದ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ರಾಜ್ಯ ಮಟ್ಟದ ಪ್ರಥಮ ವರ್ಷದ ಚಕ್ಕಡಿ ಜೋಡಿ ಕರುಗಳ ಓಟದ ಸ್ಪರ್ಧೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷೆ ಪಲ್ಲವಿ ಚಾಲನೆ ನೀಡಿದರು. ಗ್ರಾಮದ ಮುಖಂಡರು ಭಾಗವಹಿಸಿದ್ದರು    

ಮಂಡ್ಯ: ‘ಗ್ರಾಮೀಣ ಜನರ ಹಿತ ಕಾಯುವ ಜೋಡೆತ್ತುಗಳು ಸಾಮಾಜಿಕ ಜವಾಬ್ದಾರಿಯ ಜೊತೆಗೆ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿವೆ’ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷೆ ಪಲ್ಲವಿ ತಿಳಿಸಿದರು.

ಹುಲಿ ಗೆಳೆಯರ ಬಳಗದ ವತಿಯಿಂದ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ರಾಜ್ಯ ಮಟ್ಟದ ಪ್ರಥಮ ವರ್ಷದ ಚಕ್ಕಡಿ ಜೋಡಿ ಕರುಗಳ ಓಟದ ಸ್ಪರ್ಧೆ ಚಾಲನೆ ನೀಡಿ ಮಾತನಾಡಿದರು.

ಎತ್ತಿನ ಗಾಡಿ ಓಟದ ಸ್ಪರ್ಧೆಯು ಕಠಿಣವಾಗಿದ್ದು, ಯಾವುದೇ ಅವಘಡಗಳು ಸಂಭವಿಸದ ಹಾಗೆ ಸ್ಪರ್ಧೆಯು ಜರುಗಲಿ, ರೈತ, ಯುವಜನರಲ್ಲಿ ಸ್ವಾಭಿಮಾನ ಮತ್ತು ಸ್ವಯಂ ಜೀವನ ರೂಪಿಸುವಂತಹ ಜೀವನ ಕ್ರಮಗಳನ್ನು ಅನುಸರಿಸಿಕೊಳ್ಳಲಿ ಎಂದು ಹೇಳಿದರು.

ADVERTISEMENT

ಪರಿಸರ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಯೋಗೀಶ್ ಮಾತನಾಡಿ, ‘ರೈತರ ಆದಾಯೋತ್ಪನ್ನ ಚಟುವಟಿಕೆಗಳಿಗೆ ಎತ್ತಿನ ಕರುಗಳು ತುಂಬಾ ಮುಖ್ಯವಾಗಿದ್ದು, ಆಧುನಿಕ ಯಂತ್ರೋಪಕರಣಗಳು ಬರುವ ಮುನ್ನ ರೈತನ ಜೀವನಾಡಿಯಾಗಿದ್ದವು. ಆಧುನಿಕ ಕೃಷಿ ಪದ್ಧತಿಯ ಅಳವಡಿಕೆಯಿಂದಾಗಿ ಗ್ರಾಮೀಣ ಜನರಲ್ಲಿ ಎತ್ತುಗಳ ಸಾಕಾಣಿಕೆ ಕ್ಷೀಣಿಸಿರುವುದು ವಿಷಾದನೀಯ’ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೆ. ಮಧು ಅವರು ಜೋಡೆತ್ತುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಗ್ರಾಮೀಣ ಯುವಜನರಲ್ಲಿ ಸಂಘಟನಾ ಮನೋಭಾವ ಬೆಳೆಯುವಲ್ಲಿ ಈ ರೀತಿಯ ಸ್ಪರ್ಧೆಗಳು ಉತ್ತಮವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಆರೋಗ್ಯಕರ ರೀತಿಯಲ್ಲಿ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಜೆ. ಗಿರೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಗದೀಶ್, ಅನಿಲ್, ಹುಲಿ ಗೆಳೆಯರ ಬಳಗದ ಮುಖ್ಯಸ್ಥ ಮೋಹನ್, ಪದಾಧಿಕಾರಿಗಳಾದ ಶಶಾಂಕ, ಕಿರಣ್, ಮಹೇಂದ್ರ, ಸುಖೀ, ಪವನ್, ಪ್ರಸನ್ನ ಹಾಜರಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಜೋಡಿ ಕರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.