
ಕೆ.ಆರ್. ಪೇಟೆ: ‘ಯುವಕರು ಹಾಗೂ ರಾಜಕಾರಣಿಗಳಿಗೆ ಬಿ.ವೈ.ನೀಲೇಗೌಡರು ಮಾದರಿಯಾಗಿದ್ದು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ತಾಲ್ಲೂಕಿನ ಬೂಕನಕೆರೆ ಹೋಬಳಿ ಬಲ್ಲೇನಹಳ್ಳಿಯಲ್ಲಿ ಆಯೋಜಿಸಿದ್ದ ಪಾಂಡವಪುರ ತಾಲ್ಲೂಕಿನ ಪ್ರಥಮ ಶಾಸಕ ಬಿ.ವೈ.ನೀಲೇಗೌಡರ 52ನೇ ಸ್ಮರಣೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
‘ನಮ್ಮ ಹಿಂದಿನ ರಾಜಕಾರಣಿಗಳು ತಮ್ಮ ಬದುಕನ್ನು ದೇಶ ಮತ್ತು ಸಮಾಜಸೇವೆಗೆ ತೊಡಗಿಸಿಕೊಂಡವರು, ಜನಸೇವೆಯೇ ಜನಾರ್ದನ ಸೇವೆ ಎಂದು ಬಾಳ್ವೆ ನಡೆಸಿದರು. ಹಾಗಾಗಿ ನೀಲೇಗೌಡರು ಮಾಡಿದ ಸಾಧನೆ ನಮ್ಮ ಕಣ್ಣು ಮುಂದೆ ಇದೆ. ಪಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆಯೇ ಅವರ ತ್ಯಾಗದ ಬದುಕಿಗೆ ಸಾಕ್ಷಿ’ ಎಂದರು.
ನಿವೃತ್ತ ಸಹ ಪ್ರಾಧ್ಯಾಪಕ ಚಿಕ್ಕಮರಳಿ ಬೋರೇಗೌಡ ಪ್ರದಾನ ಉಪನ್ಯಾಸ ನೀಡಿ, ‘ಬಿ.ವೈ.ನೀಲೇಗೌಡರು ಕಬ್ಬು ಬೆಳೆಗಾರರ ಹಿತ ಕಾಪಾಡಲು ಪಾಂಡವಪುರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಶ್ರಮಿಸಿದರು. 1952 ಮತ್ತು 1962ರಲ್ಲಿ ನಡೆದ ವಿದಾನಸಭಾ ಚುನಾವಣೆಯಲ್ಲಿ ಪಾಂಡವಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡು ಜನಮೆಚ್ಚುವ ಕಾರ್ಯ ಮಾಡಿದರು. ರುವುದು ಅವರ ಪರಿಶ್ರಮದಿಂದಾಗಿ ಪಿಎಸ್.ಎಸ್ ಕೆ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿ ತಾಲ್ಲೂಕಿನ ಕಬ್ಬಿನ ಬೆಳೆಗಾರರಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಚ್.ಟಿ.ಮಂಜು ಮಾತನಾಡಿ, ‘ಮನುಷ್ಯ ಉತ್ತಮ ಕೆಲಸ ಮಾಡಿದರೆ ಸತ್ತ ನಂತರವೂ ಬದುಕಿರುತ್ತಾರೆ ಎಂಬುದಕ್ಕೆ ನೀಲೇಗೌಡರೇ ಸಾಕ್ಷಿಯಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಗ್ರಾಮದ ಗೌರವವನ್ನು ಹೆಚ್ಚಿಸಿದೆ’ ಎಂದರು.
ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್ ಬಿ.ವೈ.ನೀಲೇಗೌಡರ ಭಾವಚಿತ್ರ ಅನಾವರಣ ಮಾಡಿ, ವಿವಿಧ ಕ್ಷೇತ್ರಗಳ 50 ಸಾಧಕರನ್ನು ಗೌರವಿಸಿದರು.
ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಯಮುನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಬಿ.ಎಂ. ರಾಮಚಂದ್ರ, ಬಿ.ಎಸ್. ನಂದೀಶ್. ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆಯ ಅಧ್ಯಕ್ಷ ವೆಂಕಟೇಶ್, ಬಿ.ಸಿ. ವಿಜಯಕುಮಾರ್, ಆಲಕೆರೆಯ ರೈತರ ಶಾಲೆಯ ಮುಖ್ಯಸ್ಥ ಸತ್ಯಮೂರ್ತಿ, ಗ್ರೀನ್ ಸಂಸ್ಥೆಯ ವಿಜ್ಞಾನಿ ಡಾ. ವಸಂತಕುಮಾರ್, ಡಾ.ಹರೀಶ್, ಗ್ರಾಮದ ಮುಖಂಡರಾದ ದೊಡ್ಡಪಾಪೇಗೌಡ, ಛೇರ್ಮೆನ್ ಸ್ವಾಮೀಗೌಡ, ರಾಮಕೃಷ್ಣೇಗೌಡ, ಪಟೇಲ್ ಸ್ವಾಮೀಗೌಡ, ಮಾಧವ, ಪ್ರಶಾಂತ್, ನಂದೀಶ್, ಪ್ರದೀಪ್, ಬಿ.ಎಸ್.ರಾಮು, ಸ್ವಾಮೀಗೌಡ, ಯೋಗೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.