ADVERTISEMENT

ಶ್ರೀರಂಗಪಟ್ಟಣ | ಕಾವೇರಿ ನದಿ ಜಾಗ ಒತ್ತುವರಿ: ರೆಸಾರ್ಟ್‌ ಕಟ್ಟಡಗಳ ತೆರವು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 13:32 IST
Last Updated 8 ಅಕ್ಟೋಬರ್ 2025, 13:32 IST
   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಪಟ್ಟಣ ಸಮೀಪ, ಬಂಗಾರದೊಡ್ಡಿ ನಾಲೆ ಮಾರ್ಗದಲ್ಲಿ ಅತಿಕ್ರಮಕ್ಕೆ ಒಳಗಾಗಿದ್ದ ಕಾವೇರಿ ನದಿಯ ಖರಾಬು ಜಾಗವನ್ನು ಬುಧವಾರ ತೆರವು ಮಾಡಿಸಲಾಯಿತು.

ತಹಶೀಲ್ದಾರ್‌ ಚೇತನಾ ಯಾದವ್ ಅವರ ನೇತೃತ್ವದಲ್ಲಿ, ಪೊಲೀಸ್‌ ಬಿಗಿ ಭದ್ರತೆಯಲ್ಲಿ ಸುಮಾರು ನಾಲ್ಕು ತಾಸುಗಳ ಕಾಲ ತೆರವು ಕಾರ್ಯಾಚರಣೆ ನಡೆಯಿತು.

ಖಾಸಗಿ ರೆಸಾರ್ಟ್‌, ಇತರೆ ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಕೆಡವಲಾಯಿತು. ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ವಿ. ಜಯಂತ್‌ ಅವರ ಸಮಕ್ಷಮದಲ್ಲಿ ನದಿಯ ಬಫರ್‌ ವಲಯ ಗುರುತಿಸಲಾಯಿತು. ಮತ್ತೆ ಅತಿಕ್ರಮ ನಡೆಯುವುದನ್ನು ತಡೆಯಲು ನದಿ ತೀರದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಟ್ರೆಂಚ್ ತೆಗೆಸಿ ಹದ್ದುಬಸ್ತು ನಿಗದಿಪಡಿಸಿದರು.

ADVERTISEMENT

ಕಾವೇರಿ ನದಿಯ ಬಫರ್‌ ವಲಯ ವ್ಯಾಪ್ತಿ ಮೀರಿ ನಿರ್ಮಿಸಿದ್ದ ಕಟ್ಟಡ ತೆರವು ಮಾಡುವ ವೇಳೆ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ಕಾನೂನು ಮೀರಿ ಕಟ್ಟಿರುವ ಕಟ್ಟಡ ಮತ್ತು ನದಿಗೆ ಸೇರಿದ ಜಾಗದ ಅತಿಕ್ರಮ ತೆರವು ಕಾರ್ಯಾಚರಣೆಗೆ ತಕರಾರು ಮಾಡುವಂತಿಲ್ಲ, ಅಡ್ಡಿಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದರು.

ಉಪ ಲೋಕಾಯುಕ್ತರ ನಿರ್ದೇಶನ

ಪಟ್ಟಣಕ್ಕೆ ಈಚೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಸ್ಥಳೀಯರು ಕಾವೇರಿ ನದಿ ಬಫರ್‌ ವಲಯ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮತ್ತು ನೀರಾವರಿ ಇಲಾಖೆಗೆ ಸೇರಿದ ಜಾಗದ ಅತಿಕ್ರಮದ ಬಗ್ಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಅತಿಕ್ರಮ ತೆರವು ಮಾಡಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತರಿಂದ ತಾಲ್ಲೂಕು ಆಡಳಿತಕ್ಕೆ ಒಂದು ತಿಂಗಳ ಹಿಂದೆ ನಿರ್ದೇಶನ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಧವಾರ ನಸುಕಿನಲ್ಲೇ ತೆರವು ಕಾರ್ಯಾಚರಣೆ ನಡೆಯಿತು.

‘ಕಾವೇರಿ ನದಿಯ ಬಫರ್ ವಲಯ ವ್ಯಾಪ್ತಿಯಲ್ಲಿ ಸುಮಾರು 30ರಿಂದ 40 ಅಡಿಗಳಷ್ಟು ಜಾಗ ಅತಿಕ್ರಮವಾಗಿತ್ತು. ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸಿಕೊಂಡು ನದಿ ತೀರದ ವರೆಗೂ ವಿಸ್ತರಿಸಲಾಗಿತ್ತು. ಉಪ ಲೋಕಾಯುಕ್ತರ ಸೂಚನೆ ಮೇರೆಗೆ ಈ ತೆರವು ಕಾರ್ಯಾಚರಣೆ ನಡೆದಿದೆ. ತೆರವು ಮಾಡಿಸಿದ ಜಾಗ ಮತ್ತೆ ಅತಿಕ್ರಮ ಆಗದಂತೆ ನೋಡಿಕೊಳ್ಳಿ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ತಹಶೀಲ್ದಾರ್‌ ಚೇತನಾ ಯಾದವ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.