
ಕಿಕ್ಕೇರಿ: ಚಿತ್ರದುರ್ಗದ ಬಳಿ ನಡೆದ ಸ್ಲೀಪರ್ ಬಸ್ ಹಾಗೂ ಕಂಟೈನರ್ ಲಾರಿ ನಡುವಿನ ಅಪಘಾತದಲ್ಲಿ ಹೋಬಳಿಯ ಅಂಕನಹಳ್ಳಿ ಗ್ರಾಮದ ನವ್ಯಾ ಎಂಬ ಯುವತಿ ಮೃತಪಟ್ಟಿದ್ದಾರೆ. ಮದುವೆ ಏರ್ಪಾಟು ಸಂಭ್ರಮದಲ್ಲಿದ್ದ ಕುಟುಂಬಸ್ಥರು ಈಗ ದುಃಖದಲ್ಲಿ ಮುಳುಗಿದ್ದಾರೆ.
ನವ್ಯಾ (27) ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವರ್ಷದ ಕೊನೆಯ ತಿಂಗಳು ಆಗಿದ್ದ ಕಾರಣ ಪ್ರವಾಸಕ್ಕಾಗಿ ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಬಸ್‌ನಲ್ಲಿ ತೆರಳುತ್ತಿದ್ದರು. ಬೆಂಗಳೂರಿನಿಂದ ಖಾಸಗಿ ಸ್ಲೀಪರ್ ಬಸ್ ಮೂಲಕ ರಾತ್ರಿ 8 ಗಂಟೆಗೆ ಹೊರಟಿದ್ದರು.
ಮಧ್ಯರಾತ್ರಿ ಸುಮಾರು 2 ಗಂಟೆಯಲ್ಲಿ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಸಮೀಪ ಬಳಿ ಕಂಟೈನರ್ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬಸ್ ಬೆಂಕಿಯಿಂದ ಹೊತ್ತಿ ಉರಿದಿದೆ. ಈ ದುರಂತದಲ್ಲಿ ನವ್ಯಾ ಅವರು ಸುಟ್ಟು ಕರಕಲಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಅಂಕನಹಳ್ಳಿ ಮೂಲದವರಾದ ಮಂಜಪ್ಪನವರು ಚನ್ನರಾಯಪಟ್ಟಣದಲ್ಲಿ ಕೆಲವು ವರ್ಷಗಳಿಂದ ವಾಸಿಸುತ್ತಿದ್ದು, ಮೊಬೈಲ್ ಕ್ಯಾಂಟೀನ್ ನಡೆಸುತ್ತಿದ್ದರು. ಕಷ್ಟಪಟ್ಟು ತಮ್ಮ ಇಬ್ಬರು ಮಕ್ಕಳಾದ ನವ್ಯಾ ಹಾಗೂ ಕಿಶೋರ್ ಅವರನ್ನು ಎಂಜಿನಿಯರಿಂಗ್ ಓದಿಸಿದ್ದರು. ನವ್ಯಾ ಅವರಿಗೆ ಮುಂದಿನ ವರ್ಷ ಜನವರಿ 25ಕ್ಕೆ ನೆಲಮಂಗಲ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಹುಡುಗನೊಂದಿಗೆ ವಿವಾಹ ನಿಶ್ಚಯ ಹಾಗೂ ಏಪ್ರಿಲ್ 28ಕ್ಕೆ ವಿವಾಹ ಮಾಡಿಕೊಡಲು ಏರ್ಪಾಟು ಮಾಡಿಕೊಳ್ಳಲಾಗಿತ್ತು.
ವಿವಾಹ ನಿಶ್ಚಯಕ್ಕೂ ಮುನ್ನವೇ ಮೃತಳಾದ ಮಗಳ ಸಾವಿನ ಸುದ್ದಿ ತಿಳಿದು ಹೆತ್ತವರು ಮತ್ತು ಸಂಬಂಧಿಕರ ರೋದನ ಮುಗಿಲುಮುಟ್ಟುವಂತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.