ADVERTISEMENT

ಮಂಡ್ಯದಲ್ಲಿ ಕ್ರಿಸ್‌ಮಸ್ ಆಚರಣೆ: ವಿಶೇಷ ಪ್ರಾರ್ಥನೆ, ಯೇಸುಕ್ರಿಸ್ತನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:06 IST
Last Updated 26 ಡಿಸೆಂಬರ್ 2025, 5:06 IST
ಮಂಡ್ಯ ನಗರದ ಎಂ.ಸಿ. ರಸ್ತೆಯಲ್ಲಿರುವ ಸಂತ ಜೋಸೆಫರ ದೇವಾಲಯದಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಸಭಾ ಪಾಲಕರು ಚರ್ಚ್‌ಗೆ ಆಗಮಿಸಿದ ಜನರಿಗೆ ಸಿಹಿ ವಿತರಿಸಿದರು
ಮಂಡ್ಯ ನಗರದ ಎಂ.ಸಿ. ರಸ್ತೆಯಲ್ಲಿರುವ ಸಂತ ಜೋಸೆಫರ ದೇವಾಲಯದಲ್ಲಿ ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಸಭಾ ಪಾಲಕರು ಚರ್ಚ್‌ಗೆ ಆಗಮಿಸಿದ ಜನರಿಗೆ ಸಿಹಿ ವಿತರಿಸಿದರು   

ಮಂಡ್ಯ: ‘ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯದವರು‌ ಗುರುವಾರ ಕ್ರಿಸ್‌ಮಸ್‌ ಹಬ್ಬವನ್ನು ಭಕ್ತಿ ಭಾವ ಮತ್ತು ಸಡಗರದಿಂದ ಆಚರಿಸಿದರು. ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಸಿಹಿ ವಿತರಿಸಿ ಸಂಭ್ರಮ ಪಟ್ಟರು.

ಶಾಂತಿದೂತ ಯೇಸು ಕ್ರಿಸ್ತನ ಸ್ಮರಣೆಯನ್ನು ಚರ್ಚ್‌ಗಳಲ್ಲಿ ಮಾಡಲಾಯಿತು. ಕ್ರಿಸ್‌ಮಸ್‌ ಹಬ್ಬದ ಅಂಗವಾಗಿ ಬುಧವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು. ಕೆಲವು ಚರ್ಚ್‌ಗಳಲ್ಲಿ ಯೇಸು ಜನಿಸಿದ ಕೊಟ್ಟಿಗೆ (ಮ್ಯಾಂಗರ್‌)ಯನ್ನು ಸ್ಥಾಪಿಸಿ ಬಣ್ಣಬಣ್ಣದ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿತ್ತು.

ಸಂತ ಮೇರಿಯಮ್ಮನಿಗೂ ಪ್ರಾರ್ಥನೆ ಸಲ್ಲಿಸುವುದು ಸೇರಿದಂತೆ ಕ್ರಿಸ್‌ಮಸ್‌ ಟ್ರೀಗಳು ಹಾಗೂ ನಕ್ಷತ್ರಾಕಾರದ ವಿದ್ಯುತ್‌ ದೀಪಗಳು ನೋಡುಗರಿಗೆ ಮುದ ನೀಡಿದವು. ಕ್ರೈಸ್ತ ಸಮುದಾಯದವರಿಗೆ ಕ್ರಿಸ್‌ಮಸ್‌ ಶುಭಾಶಯವನ್ನು ಇತರೆ ಸಮುದಾಯದ ಸ್ನೇಹಬಳಗವು ಹೇಳುತ್ತಿದ್ದರೆ, ಕ್ರೈಸ್ತರ ಮನೆ ಮನೆಗಳಲ್ಲಿ ಹಾಗೂ ಚರ್ಚ್‌ಗಳಲ್ಲಿ ಹಬ್ಬದ ಸಡಗರ ಕಂಡುಬಂದಿತು. ಮನೆಯಲ್ಲಿ ಹೊಸಬಟ್ಟೆ ಧರಿಸಿ ಚರ್ಚ್‌ಗೆ ಹೋಗಿ ಹಾಡು ಹೇಳಿ ಸಂಭ್ರಮಿಸಿದರು. ಕೇಕ್‌ ನೀಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಮೇಣದ ಬತ್ತಿ ಹಚ್ಚಿ ಭಕ್ತಿ ತೋರಿದರೆ ಕೆಲವರು ಸಾಂಟಾ ಕ್ಲಾಸ್‌ ವೇಷ ಧರಿಸಿ ಸಂಭ್ರಮಿಸಿದರು. ಮನೆಗಳಲ್ಲಿ ಮಟನ್‌ ಬಿರಿಯಾನಿ ಮತ್ತು ಕೇಕ್‌ಗಳನ್ನು ತಯಾರಿಸಿ, ಸಂಬಂಧಿಕರಿಗೆ ಊಟ ಬಡಿಸಿ ಖುಷಿ ಪಟ್ಟರು. 

ADVERTISEMENT

ಗೋದಲಿ ನಿರ್ಮಾಣ:

ನಗರದ ಸಾಡೇ ಸ್ಮಾರಕ ದೇವಾಲಯ, ಸಂತ ಜೊಸೆಫರ ದೇವಾಲಯ, ಚೀರನಹಳ್ಳಿ ರಸ್ತೆಯ ನ್ಯೂ ಲೈಫ್‌ ಫೆಲೋಷಿಪ್‌ ಚರ್ಚ್‌, ಮಂಡ್ಯ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಚರ್ಚ್‌ಗಳಲ್ಲಿ ಯೇಸು ಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಯೇಸು ಹುಟ್ಟಿನಿಂದ ಹಿಡಿದು ಶಿಲುಬೆಗೆ ಏರಿಸುವ ತನಕ ಸಾಗಿಬಂದ ಬದುಕಿನ ಕಥನ ಹೇಳುವ ಗೋದಲಿ ನಿರ್ಮಾಣ ಮಾಡಲಾಗಿತ್ತು.

ಸಾಡೇ ಸ್ಮಾರಕ ದೇವಾಲಯದ ಸಭಾಪಾಲಕ ಆಂಡ್ರೋ ಜಾನ್‌ ಮಾತನಾಡಿ, ಯೇಸು ಜನಿಸಿದ ದಿನವನ್ನಾಗಿ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಗುತ್ತಿದೆ. ಪ್ರಭು ಯೇಸು ಕ್ರಿಸ್ತನು ಎಲ್ಲರಿಗೂ ಒಳಿತನ್ನು ಮಾಡಲಿ. ಈ ಹಬ್ಬವು ದೇವರಿಗೆ ಮಹಿಮೆಯನ್ನು ತರುವ ಹಬ್ಬವಾಗಿದೆ. ಲೋಕದಲ್ಲಿ ಶಾಂತಿ, ಸೌಹಾರ್ದತೆಯನ್ನು ಸಾರಿದ ಯೇಸುವಿನ ಹುಟ್ಟಿದ ದಿನವನ್ನು ಪ್ರಪಂಚಾದಾದ್ಯಂತ ಆಚರಿಸಲಾಗುತ್ತಿದೆ. ಕೇವಲ ಕ್ರೈಸ್ತರಿಗೆ ಮಾತ್ರವೇ ಹಬ್ಬವಲ್ಲ ಇಲ್ಲಿ ಸಮಸ್ತ ಬಾಂಧವರು ಬಂದು ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಹಬಾಳ್ವೆಗಾಗಿ ಯೇಸುವಿನಲ್ಲಿ ಪ್ರಾರ್ಥನೆ’

ನ್ಯೂ ಲೈಫ್‌ ಫೆಲೋಷಿಪ್‌ ಚರ್ಚ್‌ನ ಸಭಾಪಾಲಕ ಜೇಮ್ಸ್‌ ವರ್ಗೀಸ್‌ ಮಾತನಾಡಿ ಕ್ರಿಸ್‌ಮಸ್‌ ಹಬ್ಬದ ಶುಭಾಶಯಗಳನ್ನು ನಾಡಿನ ಜನರಿಗೆ ತಿಳಿಸಲು ಇಷ್ಟಪಡುತ್ತೇನೆ. ಜನರು ಶಾಂತಿ ಹಾಗೂ ನೆಮ್ಮದಿಯಿಂದ ಸಹಬಾಳ್ವೆ ನಡೆಸಲಿ ಎಂದು ಯೇಸುವಿನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಬರುವ ವರ್ಷದಲ್ಲಿ ಶಾಂತಿ ನಮ್ಮದಿಯನ್ನು ನೀಡಲಿ ಎಂಬುವ ಪ್ರಾರ್ಥನೆಯನ್ನು ಯೇಸುವಿನಲ್ಲಿ ಮಾಡಲಾಗಿದೆ. ಬೆಳಿಗ್ಗೆಯಿಂದ ಪ್ರಾರ್ಥೆನೆ ಸಲ್ಲಿಸಲು ಬರುತ್ತಿರುವ ಜನರನ್ನು ನೋಡಿದರೆ ಸಂತಸವಾಗುತ್ತಿದೆ. ಪ್ರಾರ್ಥನೆಯಲ್ಲಿ ಯೇಸುವಿನ ಸಂದೇಶವನ್ನು ನೀಡುವ ಮೂಲಕ ಕ್ರಿಸ್‌ಮಸ್‌ ಆಚರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.