ADVERTISEMENT

ಸೋಂಕು ನಿವಾರಕ ಸಿಂಪಡಿಸುತ್ತಿದ್ದ ಪೌರಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 11:37 IST
Last Updated 22 ಏಪ್ರಿಲ್ 2020, 11:37 IST

ಮಳವಳ್ಳಿ: ತಾಲ್ಲೂಕಿನ ಕಲ್ಕುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸೋಂಕುನಿವಾರಕ ಸಿಂಪಡಣೆ ಮಾಡುತ್ತಿದ್ದ ಪೌರಕಾರ್ಮಿಕರೊಬ್ಬರು ಅಸ್ವಸ್ಥಗೊಂಡು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ಕಲ್ಕುಣಿ ಗ್ರಾಮದ ಬಸವರಾಜು (45) ಮೃತಪಟ್ಟ ಪೌರಕಾರ್ಮಿಕ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಸಿಬ್ಬಂದಿ ಹಳ್ಳಿಗಳಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡುತ್ತಿದ್ದರು. ಸಿಬ್ಬಂದಿಗೆ ಹಳ್ಳಿಗಳ ದಾರಿ ತೋರಿಸಲು, ಬೀದಿಗಳ ಮಾಹಿತಿ ನೀಡಲು ಸಹಾಯಕನನ್ನಾಗಿ ಬಸವರಾಜು ಅವರನ್ನು ನೇಮಕ ಮಾಡಲಾಗಿತ್ತು.

ಸೋಂಕು ನಿವಾರಕ ಬೆರಸುವುದರ ಜೊತೆಗೆ ಬಸವರಾಜು ಕೆಲವು ವೇಳೆ ತಾವೇ ಸಿಂಪಡಣೆ ಮಾಡುತ್ತಿದ್ದರು. ವಾರದಿಂದ ಅವರಿಗೆ ತಲೆನೋವು, ಮೈಕೈ ನೋವು ಕಾಣಿಸಿಕೊಂಡಿತ್ತು. ಮಾತ್ರೆ ತೆಗೆದುಕೊಂಡು ಕೆಲಸ ಮುಂದುವರಿಸಿದ್ದರು. ಮಂಗಳವಾರ ಕೆಲಸ ಮಾಡುವಾಗ ಅವರು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ.

ADVERTISEMENT

ಸೋಂಕು ನಿವಾರಕದ ಅಡ್ಡ ಪರಿಣಾಮದಿಂದಲೇ ಬಸವರಾಜು ಮೃತಪಟ್ಟಿದ್ದಾರೆ ಎಂದು ಶಂಕಿಸಿದ್ದಾರೆ. ‘ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿಯಲಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.

ಸೂಕ್ತ ಪರಿಹಾರಕ್ಕೆ ಆಗ್ರಹ: ‘ಕೊರೊನಾ ಸೋಂಕು ಹರಡದಂತೆ ಶ್ರಮಿಸುತ್ತಿದ್ದ ಬಸವರಾಜು ಸೋಂಕು ನಿವಾರಕ ಅಡ್ಡ ಪರಿಣಾಮದಿಂದ ಮೃತಪಟ್ಟಿದ್ದಾರೆ. ರಕ್ತದಲ್ಲಿ ರಾಸಾಯನಿಕ ಸೋಂಕು ಉಂಟಾಗಿರುವುದು ರಕ್ತ ಪರೀಕ್ಷೆಯ ವರದಿಯಲ್ಲಿ ಪತ್ತೆಯಾಗಿದೆ. ಬಸವರಾಜು ಕುಟುಂಬ ಸದಸ್ಯರಿಗೆ ಸೂಕ್ತ ಪರಿಹಾರ ವಿತರಣೆ ಮಾಡಬೇಕು’ ಎಂದು ಜನಶಕ್ತಿ ಸಂಘಟನೆಯ ಮುಖಂಡ ಸಿದ್ದರಾಜು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.