
ನಾಗಮಂಗಲ: ಗುರು ಪರಂಪರೆಯಿಂದ ಸಂಸ್ಕೃತಿ ಉಳಿದು ಸಂಸ್ಕಾರ ಬೆಳೆಯುತ್ತದೆ ಎಂದು ಗಾಯಕಿ ಅರ್ಚನಾ ಉಡುಪ ಹೇಳಿದರು.
ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ವತಿಯಿಂದ ಶುಕ್ರವಾರ ನಡೆದ 28ನೇ ರಾಜ್ಯ ಮಟ್ಟದ ಚುಂಚಾದ್ರಿ ಕಲೋತ್ಸವವದಲ್ಲಿ ಅವರು ಮಾತನಾಡಿದರು.
‘ಆದಿಚುಂಚನಗಿರಿಯ ಆಧ್ಯಾತ್ಮಿಕ ವಾತಾವರಣ ಮತ್ತು ಈ ಪವಿತ್ರ ಮಣ್ಣಿಗೆ ವಿಶೇಷವಾದ ದೈವಿಕ ಶಕ್ತಿ ಇದ್ದು, ಇಲ್ಲಿ ನಡೆದಾಡಿದರೆ ಗುರುಶಕ್ತಿಯ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಕಲಾ ಪ್ರದರ್ಶನಕ್ಕೆ ಆಗಮಿಸಿರುವ ಶ್ರೀಮಠದ ಸಾಂಸ್ಕೃತಿಕ ರಾಯಭಾರಿಗಳಾದ ನೀವು ಈ ಶ್ರೇಷ್ಠ ಗುರು ಪರಂಪರೆಯನ್ನು ಪಾಲಿಸಿದರೆ ಉತ್ತಮ ಭವಿಷ್ಯವಿದೆ’ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಈ ಕ್ಷೇತ್ರಕ್ಕೆ 1800 ವರ್ಷಗಳ ಇತಿಹಾಸವಿದ್ದು, ಈ ಮಣ್ಣಿನ ಸ್ಪರ್ಶವು ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ. ಮನದ ಅಭೀಷ್ಟೆಗಾಗಿ ಅನೇಕ ಸಂತರು ತಪಗೈದ ಪುಣ್ಯಕ್ಷೇತ್ರ ಇದಾಗಿದೆ’ ಎಂದರು.
‘ಆಧುನಿಕ ತಂತ್ರಜ್ಞಾನ ಔನ್ನತ್ಯದ ಈ ಅವಧಿಯಲ್ಲಿ ಆಧ್ಯಾತ್ಮಿಕತೆಯೆಡೆಗೆ ಹೋಗುವುದು ಸುಲಭ ಸಾಧ್ಯವಲ್ಲ ಆದರೆ, ಸಂಸ್ಕೃತಿಯ ಭಾಗವಾಗಿರುವ ಸಂಗೀತ, ನೃತ್ಯ, ನಾಟಕ ದಂತಹ ವಿವಿಧ ಲಲಿತ ಕಲೆಗಳ ಆಸ್ವಾದನೆ ಮತ್ತು ಆರಾಧನೆಯಿಂದ ಕಲೆ ಮತ್ತು ಆಧ್ಯಾತ್ಮಿಕ ಸಿರಿಸಿಂಚನವನ್ನು ಅನುಭವಿಸಲು ಸಾಧ್ಯವಿದೆ’ ಎಂದು ಹೇಳಿದರು.
ಟ್ರಸ್ಟ್ ಆಡಳಿತಾಧಿಕಾರಿ ಎ.ಟಿ.ಶಿವರಾಮು ಮಾತನಾಡಿದರು. ಚರ್ಚಾಸ್ಪರ್ಧೆ, ಪ್ರಬಂಧ, ಕವನ, ಗಾಯನ, ನೃತ್ಯ ಸೇರಿದಂತೆ 12 ಸಹಪಠ್ಯ ಚಟುವಟಿಕೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಎಸ್.ಎನ್.ಶ್ರೀಧರ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ, ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ಶಂಕರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.