ನಾಗಮಂಗಲ: ಬೆಳಿಗ್ಗೆ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಹಾಗೂ ವಸ್ತುಗಳೆಲ್ಲ ಬೆಂಕಿಗಾಹುತಿಯಾಗಿದ್ದು, ಸುಮಾರು ₹20 ಲಕ್ಷಕ್ಕೂ ಹೆಚ್ಚು ನಷ್ಟವಾದ ಘಟನೆ ಬುಧವಾರ ನಡೆದಿದೆ.
ತಾಲ್ಲೂಕಿನ ಬೆಳ್ಳೂರು ಹೋಬಳಿಯ ದೊಡ್ಡ ಜಟಕಾದ ಹೊಸಹಳ್ಳಿ ಗ್ರಾಮದ ನಿವಾಸಿಯಾಗಿರುವ ಚಿಕ್ಕೇಗೌಡ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಮನೆಯಲ್ಲಿದ್ದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ತೀವ್ರತೆಗೆ 63×19 ಅಡಿಯ ಹೆಂಚಿನ ಮನೆಯ ಬಹುತೇಕ ಭಾಗ ಸುಟ್ಟು ಕರಕಲಾಗಿದ್ದು, ಮನೆಯಲ್ಲಿದ್ದ ಟಿ.ವಿ, ಮೊಬೈಲ್ ಫೋನ್, ಬೀರು, ಮಂಚ, ಕಾಗದ ಪತ್ರಗಳು, ಕೊಬ್ಬರಿ ಮಾರಿದ್ದ ₹3 ಲಕ್ಷ ನಗದು, 60 ಗ್ರಾಂ ಮಾಂಗಲ್ಯ ಸರ ಸೇರಿದಂತೆ ಬಟ್ಟೆ ಬರೆ ಎಲ್ಲವೂ ಸುಟ್ಟುಹೋಗಿವೆ.
ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಎರಡು ಗಂಟೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ನಷ್ಟ ತಪ್ಪಿಸಿದ್ದಾರೆ.
ಭಾರಿ ನಷ್ಟವಾಗಿದ್ದು ಜೀವನ ನಡೆಸುವುದು ಹೇಗೆ ಎಂದು ದಿಕ್ಕು ತೋಚುತ್ತಿಲ್ಲ ಎಂದು ಮನೆಯ ಮಾಲೀಕ ಚಿಕ್ಕೇಗೌಡ ಹೇಳಿದರು. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ತಹಶಿಲ್ದಾರ್ ಆದರ್ಶ್, ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳೂರು ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಘಟನೆಯ ಸಂಬಂಧ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.