ನಾಪತ್ತೆ (ಪ್ರಾತಿನಿಧಿಕ ಚಿತ್ರ)
ಭಾರತೀನಗರ: ಸಮೀಪದ ಭುಜುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಿ.ಎಸ್. ಹೇಮಂತ್ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಇಲ್ಲಿಯ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ಆಡಳಿತ ಮಂಡಳಿಯವರು ದೂರು ನೀಡಿದ್ದಾರೆ.
‘ಹೇಮಂತ್ ಅವರು ಕಾರ್ಯದರ್ಶಿಯಾದ ನಂತರ ಡಿಸಿಸಿ ಬ್ಯಾಂಕಿನ ಖಾತೆಯಲ್ಲಿದ್ದ ಸುಮಾರು ₹13 ಲಕ್ಷ ಸಂಘದ ಹಣವನ್ನು ಅಧ್ಯಕ್ಷರ ಸಹಿಯನ್ನು ನಕಲು ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದಲ್ಲದೆ ಸಂಘದ ಹೆಸರಿನಲ್ಲಿ ₹5 ಲಕ್ಷವನ್ನು ನಿರ್ಣಯ ಪುಸ್ತಕದಲ್ಲಿ ತಮಗೆ ಬೇಕಾದಂತೆ ಬರೆದುಕೊಂಡಿದ್ದು, ಅಲ್ಲಿಯೂ ಸಹ ಅಧ್ಯಕ್ಷರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ’ ಎಂದು ಸೋಮವಾರ ಕಾಡುಕೊತ್ತನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಭುಜುವಳ್ಳಿ ಗ್ರಾಮದ ಮುಖಂಡ ಡಿ.ಲೋಕೇಶ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಮನ್‌ಮುಲ್‌ನಿಂದ ತನಿಖಾ ತಂಡ ಪರಿಶೀಲನೆಗೆ ಬರಲಿದೆ ಎಂಬ ಮಾಹಿತಿ ಮೇರೆಗೆ ಸಾಲವನ್ನು ತೀರಿಸದೆ ನವೆಂಬರ್ 8ರಿಂದ ಗ್ರಾಮದಿಂದ ಹೇಮಂತ್ ನಾಪತ್ತೆಯಾಗಿದ್ದಾರೆ. ಕೆ.ಎಂ.ದೊಡ್ಡಿ ಪೊಲೀಸರಿಗೆ ದೂರು ನೀಡಿ ಒಂದೂವರೆ ತಿಂಗಳಾದರೂ ಪ್ರಯೋಜನವಾಗಿಲ್ಲ. ಈಗಿನ ಇನ್‌ಸ್ಪೆಕ್ಟರ್ ಅನಿಲ್‌ಕುಮಾರ್ ಅವರು ಹೊಸ ದೂರು ಪಡೆದು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಹಾಲು ಉತ್ಪಾದಕರಿಗೆ ಹಣ ಬಟವಾಡೆ ಮಾಡಲೂ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಎನ್.ನಾಗರಾಜು, ಉಪಾಧ್ಯಕ್ಷ ಬಿ.ಎಂ.ಪ್ರಕಾಶ, ಮಾಜಿ ಅಧ್ಯಕ್ಷ ಬಿ.ಸಿ.ವೆಂಕಟೇಶ್, ನಿರ್ದೇಶಕರಾದ ನಾಗೇಂದ್ರಪ್ಪ, ಬಿ.ಎಸ್.ಸ್ವಾಮಿ ನೀಡಿದ ದೂರಿನ ಮೇರೆಗೆ ಕೆ.ಎಂ.ದೊಡ್ಡಿ ಇನ್‌ಸ್ಪೆಕ್ಟರ್ ಅನಿಲ್‌ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.