ADVERTISEMENT

ಶ್ರೀರಂಗಪಟ್ಟಣ: ದಸರಾ ಉತ್ಸವಕ್ಕೆ ಮೆರಗು ನೀಡಿದ ರಾಸುಗಳ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:27 IST
Last Updated 29 ಸೆಪ್ಟೆಂಬರ್ 2025, 5:27 IST
ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಭಾನುವಾರ ನಡೆದ ರಾಸುಗಳ ಮೆರವಣಿಗೆಯಲ್ಲಿ ಬೆಲೆ ಬಾಳುವ ಹಳ್ಳಿಕಾರ್‌ ತಳಿಯ ಎತ್ತುಗಳು ಗಮನ ಸೆಳೆದವು
ಶ್ರೀರಂಗಪಟ್ಟಣದ ದಸರಾ ಉತ್ಸವದಲ್ಲಿ ಭಾನುವಾರ ನಡೆದ ರಾಸುಗಳ ಮೆರವಣಿಗೆಯಲ್ಲಿ ಬೆಲೆ ಬಾಳುವ ಹಳ್ಳಿಕಾರ್‌ ತಳಿಯ ಎತ್ತುಗಳು ಗಮನ ಸೆಳೆದವು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಭಾನುವಾರ ನಡೆದ ರಾಸುಗಳ ಮೆರವಣಿಗೆ ದಸರಾ ಉತ್ಸವಕ್ಕೆ ವಿಶೇಷ ಮೆರಗು ನೀಡಿತು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಿಂದ ಶ್ರೀರಂಗನಾಥಸ್ವಾಮಿ ದೇವಾಲಯದ ವರೆಗೆ ಆಕರ್ಷಕ ಮೈಕಟ್ಟಿನ ಹಳ್ಳಿಕಾರ್‌ ಮತ್ತು ಅಮೃತ ಮಹಲ್‌ ತಳಿಯ ಎತ್ತುಗಳ ಮೆರವಣಿಗೆ ಮಂಗಳ ವಾದ್ಯ ಸಹಿತ ನಡೆಯಿತು. ರೈತರು ತಮ್ಮ ಎತ್ತುಗಳನ್ನು ಬಗೆ ಬಗೆಯಾಗಿ ಸಿಂಗರಿಸಿದ್ದರು. ಹಾಲು ಬಿಳುಪಿನ, ಮಾರುದ್ದ ಕೊಂಬಿನ ಜೋಡೆತ್ತುಗಳು ಎರಡು ಕಿ.ಮೀ. ದೂರ ಗಲ ಗಲ ಹೆಜ್ಜೆ ಹಾಕಿದವು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಕರೆತಂದಿದ್ದ ಬೆಲೆ ಬಾಳುವ 40 ಜತೆಗೂ ಹೆಚ್ಚು ಎತ್ತುಗಳ ಮೈಕಟ್ಟು ಮತ್ತು ಅವುಗಳ ನಡಿಗೆಯ ಸೊಬಗನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು.

ಪಟ್ಟಣದ ಕುವೆಂಪು ವೃತ್ತ, ಪುರಸಭೆ ಕಚೇರಿ ವೃತ್ತ, ಅಂಬೇಡ್ಕರ್‌ ವೃತ್ತ, ಮಿನಿ ವಿಧಾನಸೌಧ ವೃತ್ತದ ಮಾರ್ಗವಾಗಿ ರಾಸುಗಳ ಮೆರವಣಿಗೆ ಶ್ರೀರಂಗನಾಥಸ್ವಾಮಿ ದೇವಾಲಯ ತಲುಪಿತು. ಶಾಸಕ ರಮೇಶ ಬಂಡಿಸಿದ್ದೇಗೌಡ ರಾಸುಗಳಿಗೆ ಪೂಜೆ ಸಲ್ಲಿಸಿ, ಹಣ್ಣು ತಿನ್ನಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಬಂಡೂರು ತಳಿ ಕುರಿಯನ್ನು ಎತ್ತಿಕೊಂಡು ಸಂಭ್ರಮಿಸಿದರು.

ADVERTISEMENT

ಪಾಂಡವಪುರ ತಾಲ್ಲೂಕಿನ ಡಾಮಡಹಳ್ಳಿ ವಿನೋದ್‌ ರಮೇಶ್ ಅವರ ₹10 ಲಕ್ಷ ಬೆಲೆಯ ಎತ್ತುಗಳು ಗಮನ ಸೆಳೆದವು. ಗಂಜಾಂನ ಯಶವಂತ್, ಮಂಜು ಮತ್ತು ಶಿವಕುಮಾರ್‌ ತಮ್ಮ ₹ 3.5 ಲಕ್ಷ ಬೆಲೆಯ ಮೂರು ಜತೆ ಜೋಡೆತ್ತುಗಳನ್ನು ಕರೆ ತಂದಿದ್ದರು. ಪಟ್ಟಣದ ಜರಿನ್‌ ಅವರ ₹3.20 ಲಕ್ಷ ಹಾಗೂ ಸಾಗರ್‌ ಅವರ ₹1.80 ಲಕ್ಷ ಬೆಲೆಯ ಎತ್ತುಗಳೂ ಬಂದಿದ್ದವು. ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲು, ಆರು ಹಲ್ಲು ಮತ್ತು ಬಾಯಿಗೂಡಿ ಎತ್ತುಗಳು ಮೆರಣಿಗೆಯಲ್ಲಿದ್ದವು.

ಶ್ರೀರಂಗಪಟ್ಟಣ ದಸರಾ ಉತ್ಸವದಲ್ಲಿ ಭಾನುವಾರ ನಡೆದ ರಾಸುಗಳ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ರಮೇಶ ಬಂಡಿಸಿದ್ದೇಗೌಡ ಬಂಡೂರು ತಳಿ ಕುರಿಯನ್ನು ಎತ್ತಿಕೊಂಡು ಸಂಭ್ರಮಿಸಿದರು

ತಾಲ್ಲೂಕಿನ ನಗುವನಹಳ್ಳಿಯ ಅಭಿಷೇಕ್ ಅವರ ₹22 ಸಾವಿರ ಬೆಲೆಯ ಬಂಡೂರು ತಳಿಯ 8 ತಿಂಗಳು ಪ್ರಾಯದ ಕುರಿ ಮರಿ ನೋಡುಗರನ್ನು ಆಕರ್ಷಿಸಿತು. ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಶಿವಲಿಂಗಯ್ಯ, ಸಹಾಯಕ ನಿರ್ದೇಶಕ ಡಾ.ಪ್ರವೀಣಕುಮಾರ್‌ ನೇತೃತ್ವದ ತಂಡ ಪಶು ವೈದ್ಯರು ಮತ್ತು ಸಿಬ್ಬಂದಿಯ ಮೆರವಣಿಗೆಯ ಜತೆ ಹೆಜ್ಜೆ ಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.