ADVERTISEMENT

ಬಾಲಗಂಗಾಧರನಾಥಶ್ರೀಗೆ ಭಾರತ ರತ್ನ ನೀಡಿ: BJP ಮುಖಂಡ ಇಂಡುವಾಳು ಸಚ್ಚಿದಾನಂದ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:32 IST
Last Updated 19 ಜನವರಿ 2026, 5:32 IST
ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಸಂಘದ ತಾಲ್ಲೂಕು ಘಟಕವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ ಶನಿವಾರ ಉದ್ಘಾಟಿಸಿದರು
ಶ್ರೀರಂಗಪಟ್ಟಣ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಸಂಘದ ತಾಲ್ಲೂಕು ಘಟಕವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ ಶನಿವಾರ ಉದ್ಘಾಟಿಸಿದರು   

ಶ್ರೀರಂಗಪಟ್ಟಣ: ಶಿಕ್ಷಣ, ಪರಿಸರ, ಆರೋಗ್ಯ ಇತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಆದಿ ಚುಂಚನಗಿರಿ ಮಠದ ಭೈರವೈಕ್ಯ ಬಾಲ ಗಂಗಾಧರನಾಥ ಸ್ವಾಮೀಜಿ ಅವರಿಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಆಗ್ರಹಿಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಆದಿ ಚುಂಚನಗಿರಿ ಮಠ ಸರ್ವ ಜನಾಂಗದ ಹಿತಕ್ಕಾಗಿ ಹಲವು ದಶಕಗಳಿಂದ ಕೆಲಸ ಮಾಡುತ್ತಿದೆ. ಒಕ್ಕಲಿಗರು ರಾಜ್ಯದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಒಕ್ಕಲಿಗರ ಭವನಕ್ಕೆ ಜಮೀನು ಮಂಜೂರು ಮಾಡಬೇಕು. ಶ್ರೀರಂಗಪಟ್ಟಣದಲ್ಲಿ ಒಕ್ಕಲಿಗರ ಭವನ ನಿರ್ಮಿಸಿದರೆ ₹25 ಲಕ್ಷ ನೆರವು ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು. ‘ಸಹಬಾಳ್ವೆಗೆ ಹೆಸರಾದ ಒಕ್ಕಲಿಗ ಸಮುದಾಯ ಒಗ್ಗಟ್ಟು ಕಾಯ್ದುಕೊಳ್ಳಬೇಕು. ದುಡಿಮೆಯನ್ನೇ ನೆಚ್ಚಿ ಬದುಕುವ ಒಕ್ಕಲಿಗರಲ್ಲಿ ಇತರರಿಗೆ ನೆರವು ನೀಡುವ ಗುಣ ಪರಂಪರಾಗತವಾಗಿ ಬಂದಿದೆ. ಈ ನಾಡನ್ನು ಕಟ್ಟಿ ಬೆಳೆಸಿದ ಸಮಾಜದ ಗಣ್ಯರನ್ನು ನೆನೆಯಬೇಕು. ಸ್ವಾವಲಂಬನೆಗಾಗಿ ಒಗ್ಗೂಡಿ ಕೆಲಸ ಮಾಡಬೇಕು. ಮಕ್ಕಳ ಭವಿಷ್ಯ ರೂಪಿಸಬೇಕು’ ಎಂದು ತಿಳಿಸಿದರು.

ADVERTISEMENT

ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ‘ತಾಲ್ಲೂಕಿನಲ್ಲಿ ಮೂರ್ನಾಲ್ಕು ಒಕ್ಕಲಿಗರ ಸಂಘಗಳಿವೆ. ಎಷ್ಟೇ ಸಂಘಗಳು ಇದ್ದರೂ ನಿರ್ದಿಷ್ಟ ಉದ್ದೇಶಕ್ಕಾಗಿ ಸಂಘಟಿತರಾಗಬೇಕು. ಸಮುದಾಯದ ಅಧಿಕಾರಿಗಳು ಹಾಗೂ ಮುಖಂಡರು ಮಠಾಧೀಶರ ಸಲಹೆಯಂತೆ ನಡೆಯಬೇಕು’ ಎಂದರು.

ಸಹಕಾರ ಸಂಘಗಳ ಉಪನಿಬಂಧಕ ಬಲ್ಲೇನಹಳ್ಳಿ ಶಂಕರ್‌, ಡಿವೈಎಸ್ಪಿ ಬಿ. ಚಲುವರಾಜು, ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಪ್ರಗತಿಪರ ರೈತರಾದ ಆರ್‌. ಲಕ್ಷ್ಮೀಶ್, ವಾಸು ಬಿ.ಎನ್‌ ಇತರರನ್ನು ಸನ್ಮಾನಿಸಲಾಯಿತು. ಮುಖಂಡರಾದ ಎಸ್‌.ಎಲ್‌. ಲಿಂಗರಾಜು, ಕೆ.ಎಸ್‌. ನಂಜುಂಡೇಗೌಡ, ಅಶೋಕ್ ಜಯರಾಂ, ಪಿ.ಎಚ್‌. ಚಂದ್ರಶೇಖರ್‌, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಿಮ್ಮೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಿ. ಇಂದ್ರಕುಮಾರ್‌, ಪದಾಧಿಕಾರಿಗಳಾದ ಎಚ್.ಡಿ. ಮಹದೇವು, ಟಿ. ಲಕ್ಷ್ಮಿನಾರಾಯಣ, ಎನ್‌. ಹರೀಶ್, ಚಂದ್ರು, ಶಿವರಾಮು, ಪುರುಷೋತ್ತಮ, ಶಿವಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.