ಪಾಂಡವಪುರ: ತಾಲ್ಲೂಕಿನ ಪ್ರಮುಖ ರಸ್ತೆಗಳು ತೀರ ಹದಗೆಟ್ಟಿದ್ದು, ಗುಂಡಿಮಯ ರಸ್ತೆಯಿಂದಾಗಿ ಪ್ರಯಾಣಿಕರು ಸಂಚರಿಸಲು ಪ್ರಯಾಸ ಪಡುತ್ತಿದ್ದಾರೆ. ಚಾಲನೆ ವೇಳೆ ಸ್ವಲ್ಪ ಮೈಮರೆತರೂ ಜೀವಕ್ಕೆ ಕುತ್ತು ಸಂಭವಿಸಲಿದೆ.
ಪಾಂಡವಪುರ ರೈಲ್ವೆ ನಿಲ್ದಾಣದಿಂದ ಎಲೆಕೆರೆ–ಹ್ಯಾಂಡ್ ಪೋಸ್ಟ್, ಕೆ.ಬೆಟ್ಟಹಳ್ಳಿ, ಚಿನಕುರಳಿ ಮೂಲಕ ಕೆ.ಆರ್.ಪೇಟೆ ಕಡೆಗೆ ಹಾದು ಹೋಗುವ ರಾಜ್ಯ ಹೆದ್ದಾರಿ (ಎಸ್‌ಎಚ್–7) ತೀರ ಹಾಳಾಗಿದೆ. ಮೈಸೂರಿನಿಂದ ಪಾಂಡವಪುರ ರೈಲ್ವೆ ನಿಲ್ದಾಣದ ಮೂಲಕ ಕೆ.ಆರ್.ಪೇಟೆ, ಚನ್ನರಾಯಪಟ್ಟಣ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಕಡೆಗೆ ಬಸ್‌ಗಳು, ಕಾರುಗಳು ಸೇರಿದಂತೆ ಇನ್ನಿತರ ವಾಹನಗಳು ಸಂಚರಿಸಬೇಕಾಗಿದ್ದು, ಪ್ರಯಾಣಿಕರಿಗೆ ತೀರ ತ್ರಾಸದಾಯಕವಾಗಿದೆ.
ರೈಲ್ವೆ ನಿಲ್ದಾಣದಿಂದ ಎಲೆಕೆರೆ–ಹ್ಯಾಂಡ್‌ಪೋಸ್ಟ್, ಕೆ.ಬೆಟ್ಟಹಳ್ಳಿಯವರೆಗೆ ರಸ್ತೆಯು ಹದಗೆಟ್ಟಿದ್ದರೆ, ಚಿನಕುರಳಿ ಪ್ರವೇಶಿಸುತ್ತಿದ್ದಂತೆಯೇ ರಸ್ತೆಯೇ ಮಾಯವಾಗಿದ್ದು, ಬರೀ ಹಳ್ಳ ಗುಂಡಿಗಳೇ ಎದುರಾಗುತ್ತವೆ. ಇಲ್ಲಿಂದ ಪಾಂಡವಪುರ ತಾಲ್ಲೂಕಿನ ಗಡಿಭಾಗ ಅಶೋಕನಗರದವರೆಗೂ ಸಂಚರಿಸುವವರು ಜೀವ ಹಿಡಿದುಕೊಂಡು ಪ್ರಯಾಣಿಸಬೇಕಾಗಿದೆ.
ರಾತ್ರಿ ವೇಳೆ ಹಾಗೂ ಹಗಲಿನಲ್ಲಿಯೂ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನೂರಾರು ನಡೆದಿವೆ. ಕಾರು ಸವಾರರಂತೂ ಈ ರಸ್ತೆಯಿಂದ ಬೇಗ ಪಾರಾದರೆ ಸಾಕು ಎನ್ನುತ್ತಿದ್ದಾರೆ. ಬಸ್‌ಗಳು ಗುಂಡಿಗಳಿಂದ ತಪ್ಪಿಸಿಕೊಂಡು ಮಂದಗತಿಯಲ್ಲಿ ಸಾಗುತ್ತಿವೆ. ಸವಾರರು ಹಾಗೂ ಪ್ರಯಾಣಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ವರ್ಷಗಳ ಹಿಂದೆ ಶ್ರವಣಬೆಳಗೊಳಲ್ಲಿ ಮಹಾಮಸ್ತಾಭಿಷೇಕ ನಡೆದ ವೇಳೆ ಶ್ರೀರಂಗಪಟ್ಟಣ–ಪಾಂಡವಪುರ ರೈಲ್ವೆ ನಿಲ್ದಾಣದಿಂದ ಕೆ.ಆರ್.ಪೇಟೆವರೆಗೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಕಳೆದ ಐದಾರು ವರ್ಷಗಳಿಂದ ಈ ರಸ್ತೆ ಹದಗೆಡುತ್ತಾ ಗುಂಡಿಬೀಳುತ್ತಾ ಬಂದು ಈಗ ರಸ್ತೆಯೇ ಮಾಯವಾಗುತ್ತಿದೆ. ಈ ಹಿಂದಿನ ಶಾಸಕರಾಗಲೀ, ಈಗಿನ ಶಾಸಕರಾಗಲೀ ರಸ್ತೆಯನ್ನು ಅಭಿವೃದ್ದಿಪಡಿಸಲು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ರಸ್ತೆಯನ್ನು ತಕ್ಷಣವೇ ಅಭಿವೃದ್ದಿಪಡಿಸಿ ಜನರ ಜೀವ ಕಾಪಾಡಬೇಕು ಎಂದು ಸ್ಥಳೀಯರಾದ ಕೆನ್ನಾಳು ಮಹೇಶ್, ಎಲೆಕೆರೆ ಮಹಾದೇವ, ಎಂ.ಬೆಟ್ಟಹಳ್ಳಿ ಕೃಷ್ಣ, ಚಿನಕರಳಿ ಪುಟ್ಟೇಗೌಡ, ಗುಮ್ಮನಹಳ್ಳಿ ರಮೇಶ್, ಕನಗನಹಳ್ಳಿ ಜ್ಯೋತಿ, ಕೆ.ಮಂಚನಹಳ್ಳಿ ಎಸ್.ರಾಜು ಒತ್ತಾಯಿಸಿದ್ದಾರೆ.
ಪಾಂಡವಪುರ ರೈಲ್ವೆ ನಿಲ್ದಾಣದಿಂದ ಪಾಂಡವಪುರ ತಾಲ್ಲೂಕಿನ ಗಡಿಭಾಗ ಅಶೋಕನಗರದರೆಗಿನ ರಾಜ್ಯ ಹೆದ್ದಾರಿ ರಸ್ತೆಯ ಅವ್ಯವಸ್ಥೆ ಬಗ್ಗೆ, ದುಸ್ತಿಗೆ ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಸೂಕ್ತ ಉತ್ತರ ನೀಡುತ್ತಿಲ್ಲ ಎಂದು ದೂರಿದ್ದಾರೆ.
ರಸ್ತೆ ಅಭಿವೃದ್ದಿ ಕುರಿತು ಮಾಹಿತಿಗಾಗಿ ಮಂಡ್ಯ ಪಿಡಬ್ಲ್ಯೂಡಿ ಇಇ ಹರ್ಷ ಅವರಿಗೆ ಕರೆ ಮಾಡಿದರೆ, ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.