ADVERTISEMENT

ಮೈಸೂರು, ಕೆಆರ್‌ಎಸ್‌ ಜಲಾಶಯದ ಸಮೀಪ ಭಾರಿ ಶಬ್ದಕ್ಕೆ ಕಲ್ಲುಗಣಿಗಾರಿಕೆಯೇ ಕಾರಣ

ಕೆಎಸ್‌ಎನ್‌ಡಿಎಂಸಿ ವರದಿಯಿಂದ ಬಹಿರಂಗ: ಆರ್‌ಟಿಐ ಕಾರ್ಯಕರ್ತ ರವೀಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 11:16 IST
Last Updated 27 ಸೆಪ್ಟೆಂಬರ್ 2018, 11:16 IST
   

ಮಂಡ್ಯ: ‘ಮೈಸೂರು ಹಾಗೂ ಕೆಆರ್‌ಎಸ್‌ ಜಲಾಶಯದ ಸಮೀಪ ಸೆ.25ರಂದು ಉಂಟಾದ ಭಾರಿ ಶಬ್ದಕ್ಕೆ ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯೇ ಕಾರಣ ಎಂದು ಕರ್ನಾಟಕ ರಾಜ್ಯ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ನೀಡಿದೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಹೇಳಿದರು.

ಈ ಕುರಿತು ಕೆಎಸ್‌ಎನ್‌ಡಿಎಂಸಿ ನೀಡಿರುವ ವರದಿ ಬಿಡುಗಡೆ ಮಾಡಿ ಅವರು ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದರು.

‘ಬೇಬಿಬೆಟ್ಟದಲ್ಲಿ ನಿಷೇಧಿತ ಸ್ಫೋಟಕ ಬಳಸಿ ಕಲ್ಲು ಸಿಡಿಸಿರುವ ಕಾರಣ ಭಾರಿ ಶಬ್ದ ಉಂಟಾಗಿದೆ. 6 ಸೆಕೆಂಡ್‌ ಅಂತರದಲ್ಲಿ ಎರಡು ಬಾರಿ ಸ್ಫೋಟ ನಡೆಸಲಾಗಿದೆ. ಕೆಆರ್‌ಎಸ್‌ನಲ್ಲಿರುವ ಶಾಶ್ವತ ಭೂ ಕಂಪನ ಮಾಪನ ಕೇಂದ್ರದಲ್ಲಿ ಈ ಬಗ್ಗೆ ದಾಖಲಾಗಿದೆ. ಕಲ್ಲು ಸ್ಫೋಟದಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ’ ಎಂದರು.

ADVERTISEMENT

‘ಅಕ್ರಮ ಗಣಿಗಾರಿಕೆಯಿಂದ ಐತಿಹಾಸಿಕ ಕೆಆರ್‌ಎಸ್‌ ಜಲಾಶಯ ರಕ್ಷಣೆ ಮಾಡಬೇಕು. ಈ ಕುರಿತು ಶೀಘ್ರ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತ ದಾವೆ ಹೂಡಲಾಗುವುದು’ ಎಂದು ರವೀಂದ್ರ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಕೆಎಸ್‌ಎನ್‌ಡಿಎಂಸಿ ನೀಡಿರುವ ವರದಿಯನ್ನು ನೋಡಿದ್ದೇನೆ. ಕೆಆರ್‌ಎಸ್‌ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.