ಮಂಡ್ಯ: ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡಲು ರಾಜ್ಯದ ವಿವಿಧೆಡೆ 2,500 ‘ಇವಿ ಚಾರ್ಜಿಂಗ್ ಕೇಂದ್ರ’ಗಳನ್ನು ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರದ್ದಾಗಿದೆ.
22 ಜಿಲ್ಲೆಗಳಿಗೆ 605 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಿಗೆ ಕೇವಲ ಒಬ್ಬ ಬಿಡ್ಡುದಾರ ಭಾಗವಹಿಸಿದ್ದು, ಉಳಿದ 18 ಜಿಲ್ಲೆಗಳಲ್ಲಿ ಬಿಡ್‌ಗಳೇ ಸ್ವೀಕೃತವಾಗಿಲ್ಲ. ಹೀಗಾಗಿ ಯೋಜನೆಯನ್ನೇ ಕೈಬಿಡಲು ಸರ್ಕಾರ ಆದೇಶ ಹೊರಡಿಸಿದೆ.
ಮೊದಲ ಹಂತದಲ್ಲಿ 1,190 ಮತ್ತು 2ನೇ ಹಂತದಲ್ಲಿ 1,310 ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಯೋಜನೆಯ ನೋಡಲ್ ಸಂಸ್ಥೆಯಾದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ‘ಕ್ರಿಯಾಯೋಜನೆ’ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿತ್ತು.
2023–24ನೇ ಸಾಲಿನಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಒಟ್ಟು 585 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಕಾರ್ಯಾದೇಶ ನೀಡಲಾಗಿದ್ದರೂ ಒಂದೂ ಸ್ಥಾಪನೆಯಾಗಲಿಲ್ಲ. 2024–25ರಲ್ಲಿ ಇನ್ನುಳಿದ 22 ಜಿಲ್ಲೆಗಳಲ್ಲಿ 605 ಕೇಂದ್ರಗಳ ಸ್ಥಾಪನೆಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ 4 ಜಿಲ್ಲೆಗಳಿಗೆ ಒಬ್ಬರಷ್ಟೇ ಭಾಗವಹಿಸಿದ್ದರು.
ಪ್ರತಿ ಯೂನಿಟ್‌ಗೆ ₹1 ಆದಾಯ:
ಸರ್ಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯ ಉದ್ಯಮಗಳಿಂದ ಸ್ಥಾಪಿಸಲಾಗುವ ಚಾರ್ಜಿಂಗ್ ಕೇಂದ್ರಗಳಿಗೆ ಸ್ಥಳ ಒದಗಿಸುವ ಸರ್ಕಾರಿ ಇಲಾಖೆಗಳಿಗೆ ಚಾರ್ಜಿಂಗ್‌ನಿಂದ ದಾಖಲಾಗುವ ಪ್ರತಿ ಯೂನಿಟ್ ಮೇಲೆ ₹1 ಆದಾಯ ಮತ್ತು ಪಿಪಿಪಿ ಮಾದರಿಯಲ್ಲಿ ಕರೆಯಲಾಗುವ ಟೆಂಡರ್‌ನಲ್ಲಿ ಪ್ರತಿ ಯೂನಿಟ್ ಮೇಲೆ ₹1 ಆದಾಯ ಹಂಚಲು ಆದೇಶ ಹೊರಡಿಸಲಾಗಿತ್ತು.
ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಸಬ್ಸಿಡಿ ಇಳಿಕೆಯಾಗಿದೆ. ಮತ್ತೊಂದು ಕಡೆ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆಯಿದೆ. ಹೀಗಾಗಿ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತದೆವಿನಯಕುಮಾರ್, ಮಾಲೀಕರು ಇ–ಮಾಂಡವ್ಯ ಮೋಟಾರ್ಸ್ ಮಂಡ್ಯ
ಹಿನ್ನಡೆಗೆ ಕಾರಣಗಳೇನು?
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿ ಹಿನ್ನಡೆಗೆ ಕಾರಣಗಳನ್ನು ವಿವರಿಸಿದ್ದಾರೆ
ಕಾರ್ಯಾದೇಶ ಪಡೆದ ಏಜೆನ್ಸಿಗಳಿಗೆ ಇತರೆ ಇಲಾಖೆಗಳು ಭೂಗುತ್ತಿಗೆ ಒಪ್ಪಂದವನ್ನು ಕಾರ್ಯಗತಗೊಳಿಸಲು ಸಹಕಾರ ನೀಡಲಿಲ್ಲ
ಏಜೆನ್ಸಿ ನಿಯಮಗಳ ಪ್ರಕಾರ ಅನೂಕೂಲಕರ ಸ್ಥಳಗಳನ್ನು ಗುರುತಿಸುವುದು ಸಾಧ್ಯವಾಗಲಿಲ್ಲ
ಎಲೆಕ್ಟ್ರಿಕ್ ವಾಹನಗಳು ನಿರೀಕ್ಷಿತ ಮಟ್ಟದಲ್ಲಿ ಬಳಕೆಯಲ್ಲಿರದ ಕಾರಣ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಏಜೆನ್ಸಿಗಳಿಗೆ ಆರ್ಥಿಕ ಹೊರೆಯಾಗುತ್ತದೆ
100 ಕೇಂದ್ರ ಸ್ಥಾಪನೆ: ಬೆಸ್ಕಾಂಗೆ ಆದೇಶ
ಪಿಪಿಪಿ ಮಾದರಿಯಲ್ಲಿ ‘ಇ.ವಿ ಚಾರ್ಜಿಂಗ್ ಕೇಂದ್ರ’ಗಳನ್ನು ತೆರೆಯಲು ಹಿನ್ನಡೆಯಾದ ಬೆನ್ನಲ್ಲೇ ವಿದ್ಯುತ್ ಸರಬರಾಜು ಕಂಪನಿಗಳ ಮೂಲಕ ₹35 ಕೋಟಿ ವೆಚ್ಚದಲ್ಲಿ ರಾಜ್ಯದ ವಿವಿಧೆಡೆ 100 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ವಹಿಸುವಂತೆ ನೋಡಲ್ ಸಂಸ್ಥೆಯಾದ ಬೆಸ್ಕಾಂಗೆ ಸರ್ಕಾರ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.