ADVERTISEMENT

ವಿದ್ಯುತ್ ಸ್ಪರ್ಶ: ಮತ್ತೊಂದು ಕಾಡಾನೆ ಸಾವು

ಬೆಳೆ ರಕ್ಷಣೆಗಾಗಿ ಬೇಲಿಗೆ ವಿದ್ಯುತ್‌ ಸಂಪರ್ಕ, ವಾರದಲ್ಲಿ 2ನೇ ಘಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 12:21 IST
Last Updated 16 ಡಿಸೆಂಬರ್ 2019, 12:21 IST
ಬಸವನಬೆಟ್ಟ ಅರಣ್ಯ ಪ್ರದೇಶ, ಎಚ್. ಬಸಾಪುರ ಸಮೀಪದ ಜಮೀನಿನಲ್ಲಿ ಕಾಡಾನೆ ಮೃತಪಟ್ಟಿರುವುದು
ಬಸವನಬೆಟ್ಟ ಅರಣ್ಯ ಪ್ರದೇಶ, ಎಚ್. ಬಸಾಪುರ ಸಮೀಪದ ಜಮೀನಿನಲ್ಲಿ ಕಾಡಾನೆ ಮೃತಪಟ್ಟಿರುವುದು   

ಹಲಗೂರು (ಮಂಡ್ಯ ಜಿಲ್ಲೆ): ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಸಂರಕ್ಷಣೆಗಾಗಿ ಬೇಲಿಗೆ ವಿದ್ಯುತ್‌ ಸಂಪರ್ಕ ನೀಡುತ್ತಿರುವುದು ವನ್ಯಜೀವಿಗಳ ಪ್ರಾಣಕ್ಕೆ ಸಂಚಾಕಾರ ತಂದೊಡ್ಡಿದೆ. ಶಿಂಷಾ ಅರಣ್ಯ ಪ್ರದೇಶದ ಜಮೀನಿನಲ್ಲಿ ವಿದ್ಯುತ್‌ ಸ್ಪರ್ಶದಿಂದ ಕಾಡಾನೆ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಂಥದೇ ಮತ್ತೊಂದು ಪ್ರಕರಣ ನಡೆದಿದೆ.

ಬಸವನಬೆಟ್ಟ ಅರಣ್ಯ ಪ್ರದೇಶ, ಎಚ್. ಬಸಾಪುರ ಗ್ರಾಮದ ರೈತ ಶಿವಲಿಂಗೇಗೌಡ ಎಂಬುವವರಿಗೆ ಸೇರಿದ ಜಮೀನಿಲ್ಲಿ ವಿದ್ಯುತ್‌ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿರುವುದು ಭಾನುವಾರ ಸಂಜೆ ಬೆಳಕಿಗೆ ಬಂದಿದೆ. ಆನೆ ಮೃತಪಟ್ಟು 5 ದಿನಗಳಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಮುತ್ತತ್ತಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದ 10 ವರ್ಷದ ಗಂಡಾನೆ ಜಮೀನಿನ ತಂತಿ ಬೇಲಿಗೆ ಸಂಪರ್ಕ ನೀಡಿದ್ದ ವಿದ್ಯುತ್‌ಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದೆ. ರೈತ ಶಿವಲಿಂಗೇಗೌಡರ ಮಗ ಎಸ್. ಕಿರಣ್ , ತಮ್ಮ ಜಮೀನಿಗೆ ದಾಳಿ ಇಡುತ್ತಿದ್ದ ಹಂದಿಗಳನ್ನು ತಡೆಯಲು ಜಮೀನಿನ ಸುತ್ತಲೂ ಬೇಲಿ ಹಾಕಿಸಿ ವಿದ್ಯುತ್‌ ಸಂಪರ್ಕ ನೀಡಿದ್ದರು.

ADVERTISEMENT

ಆನೆ ಸತ್ತಿರುವ ವಿಷಯ ಗೊತ್ತಿದ್ದರೂ ರೈತನ ಕುಟುಂಬ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿಲ್ಲ. ಹೀಗಾಗಿ ಶಿವಲಿಂಗೇಗೌಡರ ಪುತ್ರ ಕಿರಣ್ ಎಂಬಾತನನ್ನು ಬಂಧಿಸಲಾಗಿದೆ. ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಆನೆ ಸತ್ತಿರುವುದು ಗೊತ್ತಾಗಿದೆ. ರೈತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಕಾವೇರಿ ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದರು.

ಡಿ.8ರಂದು ಶಿಂಷಾ ಅರಣ್ಯ ಪ್ರದೇಶದ ಧನಗೂರು ಸಮೀಪ ಕಾಡಾನೆಯೊಂದು ಮೃತಪಟ್ಟಿತ್ತು. ಈಗ ಮತ್ತೊಂದು ಆನೆ ಸತ್ತಿದ್ದು ವಾರದಲ್ಲಿ ಇದು ಎರಡನೇ ಘಟನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.