ADVERTISEMENT

ಪೂರ್ವಜರಿಂದ ಬಂದ ಭೂಮಿ ಉಳಿಸಿಕೊಳ್ಳಿ: ನಿಶ್ಚಲಾನಂದನಾಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:54 IST
Last Updated 25 ಡಿಸೆಂಬರ್ 2025, 6:54 IST
ಕೆ.ಆರ್.ಪೇಟೆ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು 
ಕೆ.ಆರ್.ಪೇಟೆ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯನ್ನು ಗಣ್ಯರು ಉದ್ಘಾಟಿಸಿದರು    

ಕೆ.ಆರ್.ಪೇಟೆ: ರೈತರು ತಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದೇ ಉಳಿಸಿಕೊಳ್ಳುವಂತೆ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿ ಲಕ್ಷ್ಮೀಪುರ ಗ್ರಾಮದಲ್ಲಿ ತಾಲ್ಲೂಕು ಕೃಷಿಕ ಸಮಾಜ ಮತ್ತು ಮೈಸೂರು ಆಕಾಶವಾಣಿ ಇದರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಕೆಲವೇ ವರ್ಷಗಳಲ್ಲಿ ಭೂಮಿಯ ಬೆಲೆ ಬಂಗಾರಕ್ಕಿಂತಲೂ ಹೆಚ್ಚಾಗಲಿದೆ. ಆಮಿಷಗಳಿಗೆ ಬಲಿಯಾಗಿ ಭೂಮಿ ಕಳೆದುಕೊಂಡರೆ ಬೀದಿ ಪಾಲಾಗಬೇಕಿದೆ. ಕಾರ್ಪೂರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರಗಳು ರೈತರ ಭೂಮಿಯನ್ನು ವಶಪಡಿಸಿಕೊಂಡು ಒಕ್ಕಲೆಬ್ಬಿಸುವ ಪ್ರಯತ್ನಗಳು ರಾಷ್ಟ್ರದಾದ್ಯಂತ ನಡೆದಿದೆ. ಇರುವ ಭೂಮಿಯನ್ನು ಕಳೆದುಕೊಂಡರೆ ಮತ್ತೆ ಭೂ ಮಾಲೀಕನಾಗಲು ಸಾಧ್ಯವಿಲ್ಲ. ಆದ್ದರಿಂದ ಯಾರೊಬ್ಬರು ಪೂರ್ವಿಕರ ಜಮೀನನ್ನು ಮಾರಾಟ ಮಾಡದೆ ಉಳಿಸಿಕೊಂಡು ಕೃಷಿ ಬದುಕಿಗೆ ಅರ್ಥ ಕೊಡಬೇಕು’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಮಾತನಾಡಿ, ‘ಬದಲಾದ ಕಾಲಘಟ್ಟದಲ್ಲಿ ಕೃಷಿ ಮಾಡುವ ಮಕ್ಕಳಿಗೆ ಕೃಷಿಕರೆ ಹೆಣ್ಣು ಕೊಡದ ಸ್ಥಿತಿ ಬಂದಿದೆ. ಅದರಿಂದಾಗಿ ರೈತರ ಆತ್ಮವಿಶ್ವಾಸದ ಸೆಲೆಯು ಬತ್ತಿ ಹೋಗುತ್ತಿದೆ. ಯಾವುದೇ ಒಂದು ಕೃಷಿ ಕುಟುಂಬ ರೈತ ಮಹಿಳೆಯಿಲ್ಲದೆ ತನ್ನ ಸಂಪೂರ್ಣ ಕೃಷಿ ಬದುಕನ್ನು ನಡೆಸಲು ಸಾಧ್ಯವಿಲ್ಲ. ಕೃಷಿ ನಡೆಸುವ ಕುಟುಂಬದವರು ಕೂಡ ಒಬ್ಬ ವಿದ್ಯಾವಂತ ರೈತ ಮಗನಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದರೆ ನಾವೆಲ್ಲಾ ಎಂತಹ ಸಂದಿಗ್ಧತೆಯಲ್ಲಿದ್ದೇವೆ ಎಂದು ಅರ್ಥಮಾಡಿಕೊಳ್ಳಬೇಕು’ ಎಂದರು.

ಜಿಲ್ಲಾ ಸಂಪೂರ್ಣ ಸಾವಯವ ಕೃಷಿ ಉತ್ಪಾದಕರ ಸಂಘದ ಅಧ್ಯಕ್ಷ ಮಳವಳ್ಳಿ ಮಹೇಶ್ ಮಾತನಾಡಿ, ವಿಶ್ವಕ್ಕೆ ಅನ್ನ ಕೊಡುವ ರೈತನ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ ರೈತರೊಂದಿಗೆ ಸಂವಾದ ನಡೆಸಿದರು.

ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ನಾಟನಹಳ್ಳಿ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ರೈತ ವಿಠಲಾಪುರ ಸುಬ್ಬೇಗೌಡ, ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಆರ್.ಟಿ.ಓ ಮಲ್ಲಿಕಾರ್ಜುನ್, ಪ್ರಮುಖರಾದ ಜಾನಕೀರಾಂ, ಎ.ಎಸ್.ರಮೇಶ್, ಎ.ಆರ್.ರಘು, ಹೆತ್ತಗೋನಹಳ್ಳಿ ನಾರಾಯಣಗೌಡ, ಹೊನ್ನೇನಹಳ್ಳಿ ವೇಣು, ಚಿಕ್ಕೋನಹಳ್ಳಿ ಚೇತನ್ ಕುಮಾರ್, ಮರುವನಹಳ್ಳಿ ಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.