
ಶ್ರೀರಂಗಪಟ್ಟಣ: ಬೆಂಗಳೂರು – ಮೈಸೂರು ಜೋಡಿ ರೈಲು ಮಾರ್ಗ ವಿಸ್ತರಣೆ ಉದ್ದೇಶಕ್ಕೆ ವಶಪಡಿಸಿಕೊಂಡ ಕೃಷಿ ಜಮೀನಿಗೆ ಪರಿಹಾರ ನೀಡಿಲ್ಲ ಎಂಬ ಕಾರಣಕ್ಕೆ ಪಟ್ಟಣದ ರೈಲ್ವೆ ಇಲಾಖೆ ಕಚೇರಿಯ ಪೀಠೋಪಕರಣಗಳನ್ನು ಕೋರ್ಟ್ ಸೂಚನೆಯಂತೆ ಬುಧವಾರ ಜಫ್ತಿ ಮಾಡಲಾಯಿತು.
ಪಟ್ಟಣದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಸೂಚನೆಯಂತೆ, ಕಚೇರಿಯ ಕುರ್ಚಿ, ಮೇಜು ಇತರ ಚರ ಸ್ವತ್ತುಗಳನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು. ಪರಿಹಾರ ಪಾವತಿಸುವವರೆಗೆ ಪೀಠೋಪಕರಣಗಳು ನ್ಯಾಯಾಲಯದ ವಶದಲ್ಲಿರುತ್ತವೆ ಎಂದು ಸಿಬ್ಬಂದಿ ತಿಳಿಸಿದರು.
ತಾಲ್ಲೂಕಿನ ಕಪರನಕೊಪ್ಪಲು ಗ್ರಾಮದ ರೈತ ಬಾಲಕೃಷ್ಣ ಅವರ 4 ಗುಂಟೆ ಜಮೀನನ್ನು ರೈಲ್ವೆ ಇಲಾಖೆ 2013ರಲ್ಲಿ ವಶಪಡಿಸಿಕೊಂಡಿತ್ತು. ಅದಕ್ಕೆ ₹50 ಲಕ್ಷ ಪರಿಹಾರ ನಿಗದಿ ಮಾಡಿದ್ದು, ಭಾಗಶಃ ಹಣವನ್ನು ರೈಲ್ವೆ ಇಲಾಖೆ ಪಾವತಿಸಿತ್ತು. ಉಳಿದ ಹಣ ಪಾವತಿಸಲು ಆದೇಶಿಸುವಂತೆ ರೈತನ ಪರ ವಕೀಲ ಬಿ. ಕುಮಾರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಶೇ 50ರಷ್ಟು ಪರಿಹಾರದ ಹಣವನ್ನು ಹೈಕೋರ್ಟ್‌ನಲ್ಲಿ ಪಾವತಿಸಿ ವರದಿ ನೀಡುವಂತೆ ಸ್ಥಳೀಯ ನ್ಯಾಯಾಲಯ ಸೂಚಿಸಿತ್ತು. ಆದರೆ ರೈಲ್ವೆ ಅಧಿಕಾರಿಗಳು ಇದನ್ನು ಪಾಲಿಸಿರಲಿಲ್ಲ. ಹಾಗಾಗಿ ರೈಲ್ವೆ ಇಲಾಖೆ ಕಚೇರಿಯನ್ನು ಜಪ್ತಿ ಮಾಡುವಂತೆ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮೋಹನ್‌ಗೌಡ ಆದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.